ಬೆಂಗಳೂರು: ಗುಜರಾತ್, ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಡಿಸಿಸಿ ಬ್ಯಾಂಕ್ಗಳನ್ನು ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನ ಮಾಡುವ ಚಿಂತನೆ ನಡೆಸಲಾಗಿದೆ. ಈ ಕುರಿತು ಸಾಧಕ ಬಾಧಕ ನೋಡಿಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಜರಾತ್, ಛತ್ತೀಸ್ಗಡ, ಕೇರಳದಲ್ಲಿ ಡಿಸಿಸಿ ಬ್ಯಾಂಕ್ಗಳನ್ನು ಅಪೆಕ್ಸ್ ಬ್ಯಾಂಕ್ಗಳ ಜೊತೆ ವಿಲೀನ ಮಾಡಲಾಗಿದೆ. ವಿಲೀನದಿಂದ ಡಿಸಿಸಿ ಬ್ಯಾಂಕ್ನ ಕಮೀಷನ್ ನೇರವಾಗಿ ರೈತರಿಗೆ ಸಿಗಲಿದೆ ಎನ್ನುವ ಕಾರಣಕ್ಕೆ ಈ ನಿರ್ಧಾರವನ್ನು ಅಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅದರ ಹಿನ್ನೆಲೆಯಲ್ಲಿ ನಮ್ಮ 21 ಡಿಸಿಸಿ ಬ್ಯಾಂಕ್ ಎಂಡಿಗಳ ಜೊತೆ ಪ್ರಾಥಮಿಕ ಸಭೆ ಮಾಡಿದ್ದೇವೆ. ಈ ರೀತಿ ನಮ್ಮಲ್ಲಿಯೂ ಮರ್ಜ್ ಮಾಡುವುದರಿಂದ ಏನೇನು ಅನುಕೂಲ, ಅನಾನುಕೂಲ ಆಗಲಿದೆ ಎನ್ನುವ ಕುರಿತು ಚರ್ಚೆಯಾಗಿದೆ. ಕೇರಳ, ಗುಜರಾತ್, ಛತ್ತೀಸ್ಗಡಕ್ಕೆ ಅಧಿಕಾರಿಗಳ ತಂಡ ಕಳಿಸಿ ಅಲ್ಲಿ ಮರ್ಜ್ ಮಾಡಿರುವುದರಿಂದ ಆಗಿರುವ ಅನುಕೂಲದ ಕುರಿತು ವರದಿ ತರಿಸಿಕೊಂಡು ಸಾಧಕ-ಬಾಧಕ ಚರ್ಚಿಸಿ ನಂತರ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿ ಕೊಡಲಾಗುತ್ತದೆ ಎಂದರು.