ಬೆಂಗಳೂರು: ಹೆಲ್ಲೇಗೆರೆ ಶಂಕರ್ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಹಣ, ಆಸ್ತಿ-ಅಂತಸ್ತು ಎಲ್ಲವೂ ಇದ್ದರೂ ಕುಟುಂಬದಲ್ಲಿ ನೆಮ್ಮದಿ ಇರಲಿಲ್ಲ ಎಂಬುದು ಹೆಲ್ಲೇಗೆರೆ ಶಂಕರ್ ಸಲ್ಲಿಸಿರುವ ದೂರಿನ ಮೂಲಕ ತಿಳಿಯುತ್ತಿದೆ.
ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಹೆಲ್ಲೇಗೆರೆ ಶಂಕರ್ ಕುಟುಂಬಕ್ಕೆ ಯಾವುದರಲ್ಲೂ ಕೊರತೆ ಇರಲಿಲ್ಲ. ಹಣ, ಆಸ್ತಿ-ಅಂತಸ್ತು ಎಲ್ಲವೂ ಬೇಕಾಗಿದ್ದಕ್ಕಿಂತ ಹೆಚ್ಚೇ ಇತ್ತು. ಆದರೆ ಮಾನಸಿಕ ನೆಮ್ಮದಿ ಮಾತ್ರ ಕುಟುಂಬದಲ್ಲಿ ಇರಲಿಲ್ಲವೆಂದು ತಿಳಿದುಬಂದಿದೆ. ಶಂಕರ್ ಪತ್ನಿ ಕಿರಿಕಿರಿ ಸದಾ ಕಾಡುತ್ತಲೇ ಇತ್ತು. ಇದರ ಮಧ್ಯೆ ಎರಡು ಹೆಣ್ಣುಮಕ್ಕಳ ದಾಂಪತ್ಯ ಜೀವನ ಬಿರುಕು ಇಡೀ ಫ್ಯಾಮಿಲಿಯನ್ನು ಮತ್ತಷ್ಟು ಜರ್ಜರಿತರನ್ನಾಗಿ ಮಾಡಿತ್ತು. ಮಾನಸಿಕ ನೆಮ್ಮದಿ ಇಲ್ಲದೇ ಕುಟುಂಬ ಸಾವಿನ ಮನೆ ಸೇರಿದೆ. ಇಬ್ಬರು ಹೆಣ್ಣು ಮಕ್ಕಳ ದಾಂಪತ್ಯದ ಬಿರುಕು ಇದೀಗ ಇಡೀ ಕುಟುಂಬವನ್ನು ಬಲಿ ಪಡೆದಿದೆ.
ಐವರ ಆತ್ಮಹತ್ಯೆಗೆ ಕಾರಣವಾಯ್ತಾ ಹೆಣ್ಣುಮಕ್ಕಳ ದಾಂಪತ್ಯ ಬಿರುಕು?
ಜೀನಿನ ಗೂಡಿನಂತಿದ್ದ ಕುಟುಂಬದಲ್ಲಿ ಶಂಕರ್ ಪತ್ನಿ ಭಾರತಿಯವರ ಕಿರಿ ಕಿರಿ ಹೆಚ್ಚು ಇತ್ತು ಅಂತ ಹೇಳಲಾಗುತ್ತಿದೆ. ಶಂಕರ್ ಹಾಗೂ ಭಾರತಿ ಮಧ್ಯೆ ಮಕ್ಕಳ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಅಲ್ಲದೇ ಮೊದಲ ಮಗಳು ಸಿಂಚನಾ ಮೂರು ವರ್ಷದ ಹಿಂದೆ ತಂದೆ ಮನೆಗೆ ಬಂದಿದ್ದಳು. ಕೌಟುಂಬಿಕ ಕಲಹ ಹಿನ್ನೆಲೆ ತಂದೆ ಮನೆಗೆ ಬಂದಿದ್ದ ಸಿಂಚನಾ ಇಲ್ಲಿಯೇ ಉಳಿದುಬಿಟ್ಟಿದ್ದಳು.
ಗಂಡನ ಮನೆಗೆ ಹೋಗುವಂತೆ ಶಂಕರ್ ಹೇಳಿದ್ದರೂ ಪತ್ನಿ ಭಾರತಿ ಮಾತ್ರ ಮಗಳು ಎಲ್ಲಿಯೂ ಹೋಗೋದು ಬೇಡ, ಇಲ್ಲಿಯೇ ಇರಲಿ ಎಂದು ಪಟ್ಟು ಹಿಡಿದಿದ್ದಳು. ಅದರಂತೆ ಹಿರಿಯ ಪುತ್ರಿ ಇಲ್ಲಿಯೇ ಉಳಿದುಕೊಂಡಿದ್ದಳು. ಮಗಳ ಜೀವನ ಹೀಗಾಯ್ತಲ್ಲ ಅನ್ನೋ ನೋವು ಶಂಕರ್ಗೆ ಕಾಡತೊಡಗಿತ್ತು. ಆದ್ರೆ ಶಂಕರ್ ಅವರು ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗ್ಲಿ ಅಂದರೆ ಸಾಕು ಎಲ್ಲರ ಕಣ್ಣು ಕೆಂಪಾಗ್ತಿತ್ತು.
ಒಂದು ತಿಂಗಳ ಹಿಂದೆ ಮಾತ್ರೆ ಸೇವಿಸಿ ಶಂಕರ್ ಎರಡನೇ ಪುತ್ರಿ ಆತ್ಮಹತ್ಯೆ ಯತ್ನ:
ಎರಡನೇ ಪತ್ರಿ ಸಿಂಧೂರಾಣಿಯ 9 ತಿಂಗಳ ಕಂದಮ್ಮನ ನಾಮಕರಣ ಮತ್ತು ಕಿವಿ ಚುಚ್ಚಿಸುವ ವಿಚಾರವಾಗಿ ಹಲ್ಲೇಗೇರೆ ಶಂಕರ್ ಮತ್ತು ಮಗಳು ಸಿಂಧೂರಾಣಿ ಪತಿಯ ಕುಟುಂಬದ ನಡುವೆ ಸಾಕಷ್ಟು ಮೈಮನಸ್ಸು ಇತ್ತು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಅಲ್ಲದೇ ಇದೇ ವಿಚಾರಕ್ಕೆ ಸಿಂಧೂರಾಣಿ ಒಂದು ತಿಂಗಳ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ಕೂಡ ಮಾಡಿದ್ದಳಂತೆ. ಆಸ್ಪತ್ರೆಗೆ ದಾಖಲಿಸಿ ಮತ್ತೆ ಮನೆಗೆ ಕರೆತರಲಾಗಿತ್ತು. ಆದರೆ ಅದು ಅಲ್ಲಿಗೆ ಸರಿಹೋಗಲಿಲ್ಲ.
ಕುಟುಂಬಸ್ಥರ ನಡುವೆ ಮನಸ್ತಾಪ:
ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗಲಿ ಅಂತ ಶಂಕರ್ ಪದೇ ಪದೇ ಹೇಳುತ್ತಿದ್ದರು. ಆದರೆ ಶಂಕರ್ ಪತ್ನಿ ಭಾರತಿ ಮಾತ್ರ ಮಕ್ಕಳು ಮನೆಯಲ್ಲೇ ಇರಲಿ, ತೊಂದರೆ ಏನು ಎಂದು ಹೇಳತೊಡಗಿದ್ದರು. ಇದು ಶಂಕರ್ ಹಾಗೂ ಪತ್ನಿ, ಪುತ್ರಿಯರ ನಡುವಿನ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗ್ತಿದೆ.