ಬೆಂಗಳೂರು: ಈ ಬಾರಿ ಸರಳತೆಯಿಂದ ದಸರಾ ನಡೆಸಲಾಗುತ್ತಿದ್ದು, ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸರ್ಕಾರ ಹಾಗೂ ದಸರಾ ಸಮಿತಿಯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದಸರಾ ಕಾರ್ಯಕ್ರಮವೇ ದೊಡ್ಡ ಮಟ್ಟಿಗೆ ಕೊರೊನಾ ಸ್ಪ್ರೆಡ್ ಆಗಲು ನಾಂದಿಯಾಗಬಾರದು ಎಂದು ದಸರಾ ಉದ್ಘಾಟಕ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜನರು ಮಾಸ್ಕ್ ಕಡ್ಡಾಯವಾಗಿ ಹಾಕಬೇಕು. ಈ ಸಂಬಂಧ ಸರ್ಕಾರದ ಜೊತೆ ಎಲ್ಲರೂ ಕೈ ಜೋಡಿಸಬೇಕು. ವೈದ್ಯರೊಬ್ಬರನ್ನು ಮೊದಲ ಬಾರಿಗೆ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದು ಸರ್ಕಾರಕ್ಕೆ ವೈದ್ಯ ಸಮುದಾಯದ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ.
ದಸರಾ ದೊಡ್ಡ ಮಟ್ಟಿಗೆ ಕೊರೊನಾ ಹರಡಲು ನಾಂದಿಯಾಗಬಾರದು: ಡಾ.ಸಿ.ಎನ್.ಮಂಜುನಾಥ್ - ಮೈಸೂರು ದಸರಾ 2020
ವೈದ್ಯರೊಬ್ಬರನ್ನು ಮೊದಲ ಬಾರಿಗೆ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದು ಸರ್ಕಾರಕ್ಕೆ ವೈದ್ಯ ಸಮುದಾಯದ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ದಸರಾ ಉದ್ಘಾಟಕ ಡಾ.ಸಿ.ಎನ್.ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ನಾವು ಸಿಎಂ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಮತ್ತು ದಸರಾ ಸಮಿತಿಯ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವೈದ್ಯರೊಬ್ಬರನ್ನು ನಾಡಹಬ್ಬ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವುದು ವೈದ್ಯಕೀಯ ಸಮುದಾಯ ಹಾಗೂ ಫ್ರಂಟ್ ಲೈನ್ ವಾರಿಯರ್ಸ್ಗೆ ಸರ್ಕಾರ ನೀಡಿದ ಗೌರವವಾಗಿದೆ.
ರಾಜ್ಯದಲ್ಲಿ ಕೊರೊನಾ ಯಾವಾಗ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ರಾಜ್ಯದಲ್ಲಿ ಹೆಚ್ಚು ಹೆಚ್ಚು ಟೆಸ್ಟಿಂಗ್ ನಡೆಯುತ್ತಿದೆ. ಪಾಸಿಟಿವ್ ಬರುವ ಪ್ರಮಾಣ ಶೇ 13ರಷ್ಟಿದೆ. ದೇಶಾದ್ಯಂತ ಕೊರೊನಾ ಪ್ರಕರಣಗಳ ಪ್ರಮಾಣ ಒಂದೇ ರೀತಿ ಇದೆ. ನಮ್ಮಲ್ಲಿ ಮರಣದ ಪ್ರಮಾಣ ಕಡಿಮೆಯಿದ್ದು, ಸದ್ಯ ವ್ಯವಸ್ಥೆ ಸುಧಾರಿಸುತ್ತಿದೆ. ಉಚಿತ ಔಷಧ ನೀಡಲಾಗುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ ಎಂದರು.
ಸಾಮಾನ್ಯವಾಗಿ ಲಸಿಕೆ ಬರಲು ಒಂದು ವರ್ಷ ಬೇಕಾಗುತ್ತದೆ. ಲಸಿಕೆಯ ಪ್ರಯೋಗವನ್ನು ವ್ಯಾಪಕವಾಗಿ ಮಾಡಬೇಕಾಗುತ್ತದೆ. ಅದರಿಂದ ಯಾರ ಮೇಲೂ ಅಡ್ಡಪರಿಣಾಮ ಬೀರಬಾರದು. ವೈರಸ್ಗಿಂತ ಹೆಚ್ಚು ಲಸಿಕೆಯಿಂದಾಗಿ ತೊಂದರೆಯಾಗಬಾರದು ಎಂದು ತಿಳಿಸಿದರು.