ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರ ತಡೆಯಲು ರಾಜ್ಯ ಸರ್ಕಾರ ಇಂದಿನಿಂದ ಲಾಕ್ ಡೌನ್ ಜಾರಿ ಮಾಡಿದ್ದು, ಇದರಿಂದ ದುಡಿಯವ ವರ್ಗಕ್ಕೆ ಮತ್ತೆ ಆತಂಕ ಎದುರಾಗಿದೆ. ಬಿಗಿ ನಿರ್ಬಂಧಗಳಿಂದ ತೊಂದರೆಗೆ ಒಳಗಾಗುವ ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳಿಗೆ ಸೂಕ್ತ ಪರಿಹಾರದ ಪ್ಯಾಕೇಜ್ ನೀಡುವ ಬಗ್ಗೆ ಸರ್ಕಾರ ಮೌನವಹಿಸಿದೆ.
ಕಳೆದ ವರ್ಷ ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಸುಮಾರು ಒಂದೂವರೆ ತಿಂಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ರೈತರು, ಕಾರ್ಮಿಕರು ಸೇರಿದಂತೆ ವೃತ್ತಿ ನಿರತ ಸಮುದಾಯಗಳು ಕೆಲಸವಿಲ್ಲದೇ ಸಾಕಷ್ಟು ಸಂಕಷ್ಟ ಎದುರಿಸಿದ್ದವು.
ದಿನಗೂಲಿ ನೌಕರರ ಜೇಬಿಗೆ ಸೇರದ ಹಳೆ ಲಾಕ್ಡೌನ್ ಪ್ಯಾಕೇಟ್: ಪ್ರತಿದಿನದ ಆದಾಯವನ್ನೇ ನೆಚ್ಚಿಕೊಂಡು ಬದುಕುವ ಆಟೋ, ಟ್ಯಾಕ್ಸಿ ಚಾಲಕರು, ದಿನಗೂಲಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಹೂ ಮಾರುವವರು, ಸಾಂಪ್ರದಾಯಿಕ ವೃತ್ತಿಗಳನ್ನೇ ನಂಬಿ ಜೀವನಸಾಗಿಸುತ್ತಿರುವ ನೇಕಾರರು, ಸವಿತಾ ಸಮಾಜದವರು, ಮಡಿವಾಳರು ಸೇರಿದಂತೆ ಅನೇಕ ಸಮುದಾಯಗಳಿಗೆ 2,272 ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಸರ್ಕಾರ ಘೋಷಣೆ ಮಾಡಿದ ಪರಿಹಾರ ಪಡೆಯುವಲ್ಲಿ ಎಲ್ಲ ಸಮಾಜದವರು ಪರದಾಡುವಂತಾಯಿತು. ಸರ್ಕಾರದ ಮಾನದಂಡದಿಂದಾಗಿ ಹಲವು ಸಮುದಾಯಗಳಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ.
ಮತ್ತೆ ಲಾಕ್ಡೌನ್ ಬರೆ: ರಾಜ್ಯದಲ್ಲಿ ಕಳೆದ ಬಾರಿಗಿಂತ ವೇಗವಾಗಿ ಕೊರೊನಾ ಎರಡನೇ ಅಲೆ ಹರಡುತ್ತಿದೆ. ಕೋವಿಡ್ ಸೋಂಕಿನ ಅಬ್ಬರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮೊದಲ ಪ್ರಯತ್ನವಾಗಿ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ನಂತರ ಜನತಾ ಕರ್ಪ್ಯೂ ಜಾರಿಗೊಳಿಸಿತ್ತು. ಆ ವೇಳೆ, ಬಹುತೇಕ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಿತ್ತು. ಜನತಾ ಕರ್ಪ್ಯೂ ನಿಂದ ಕೊರೊನಾ ನಿಯಂತ್ರಣ ಆಗದಿರುವುದರಿಂದ ರಾಜ್ಯ ಸರ್ಕಾರ ಮತ್ತೆ ಲಾಕ್ ಡೌನ್ ಘೋಷಣೆ ಮಾಡಿದೆ.
ದುಡಿಯುವ ವರ್ಗಕ್ಕೆ ಪರಿಹಾರದ ಅಗತ್ಯ: ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಕಡೆ ಗಮನಹರಿಸುತ್ತಿರುವ ಸರ್ಕಾರ, ತಜ್ಞರ ಸಲಹೆಗಳಿಗೆ ಆದ್ಯತೆ ನೀಡಿಲ್ಲ. ಕಾಟಾಚಾರಕ್ಕೆ ಲಾಕ್ ಡೌನ್ ಮಾಡಿ ಬಡ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ದುಡಿಯುವ ವರ್ಗಗಳಿಗೆ ಪರಿಹಾರ ನೀಡಬೇಕೆಂಬ ಬೇಡಿಕೆಯೂ ಕೇಳಿ ಬರುತ್ತಿದೆ.
ಲಾಕ್ ಡೌನ್ ನಿಂದ ಕಂಗಾಲಾಗಿರುವ ದುಡಿಯುವ ವರ್ಗಕ್ಕೆ ಪರಿಹಾರದ ಪ್ಯಾಕೇಜ್ ಘೋಷಿಸಿಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಆಗ್ರಹಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.