ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗುರುವಾರ ಭೇಟಿ ನೀಡಿದ ಡಿಕೆಶಿ, ಅಲ್ಲಿನ ಪದಾಧಿಕಾರಿಗಳು ಹಾಗೂ ಅವರ ಮೂಲಕ ಕನ್ನಡ ಚಲನಚಿತ್ರರಂಗದ ಸಮಸ್ತರು ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಳೆದ 2 ವರ್ಷದಿಂದ ತಾವು ಪಟ್ಟ ಶ್ರಮ, ಬ್ಯಾಂಕ್, ಸರ್ಕಾರದವರ ಸಹಕಾರ ಇಲ್ಲದೇ ವಾಣಿಜ್ಯ ಮಂಡಳಿ, ಸಹಾಯಕ ನಿರ್ದೇಶಕರು, ಮೇಕಪ್ ಮ್ಯಾನ್, ಲೈಟಿಂಗ್ ಕಾರ್ಮಿಕರು, ಚಿತ್ರಮಂದಿರ ಮಾಲೀಕರು, ತಂತ್ರಜ್ಞರವರೆಗೂ ಎಲ್ಲರಿಗೂ ತೊಂದರೆಯಿತು. ನಾನು ಎರಡು-ಮೂರು ಬಾರಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಧ್ವನಿ ಎತ್ತಿದೆ. ಸರ್ಕಾರಕ್ಕೆ ನಿಮ್ಮ ಪ್ರಾಮುಖ್ಯತೆ ಗೊತ್ತಿಲ್ಲ. ನಿರ್ಮಾಪಕರು ಒಂದು ಸಿನಿಮಾ ತೆಗೆಯಲು ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸುತ್ತಿದ್ದಾರೆ. ಆದರೆ ಅವರನ್ನು ಯಾವ ಸರ್ಕಾರವೂ ಪರಿಗಣಿಸಿಲ್ಲ ಎಂದರು.
ಕರ್ನಾಟಕ ಚಲನ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ ಡಿಕೆಶಿ ಪಕ್ಷಾತೀತ ಹೋರಾಟ:
ನಾನಿಲ್ಲಿಗೆ ಬಂದ ಉದ್ದೇಶ ರಾಜ್ಯದ ಹಿತಕ್ಕಾಗಿ. ಇಲ್ಲಿ ರಾಜಕಾರಣ ಮುಖ್ಯವಲ್ಲ. ಬೆಂಗಳೂರಿನ ಜನಸಂಖ್ಯೆ 2 ಕೋಟಿ ಸಮೀಪವಿದ್ದರೆ, ಕಾವೇರಿ ಜಲಾನಯನ ಪ್ರದೇಶದ ಜನಸಂಖ್ಯೆ 2 ಕೋಟಿ ಇದೆ. ನಾವೆಲ್ಲ ಸೇರಿ ಪಕ್ಷಾತೀತವಾಗಿ ರಾಷ್ಟ್ರಧ್ವಜ, ಕನ್ನಡ ಬಾವುಟ ಇಟ್ಟು ಈ ನಡಿಗೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸುತ್ತಿದ್ದೇನೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಮಯದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಕಳುಹಿಸಿಕೊಟ್ಟಿದ್ದು, ಅನುಮತಿ ಸಿಕ್ಕಿದೆ.
ಪರಿಸರ ಇಲಾಖೆ ಅನುಮತಿ ಮಾತ್ರ ಬೇಕಾಗಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಎಂ.ಬಿ.ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ಮೊದಲು ಡಿಪಿಆರ್ ಪ್ರಾರಂಭವಾಯಿತು. ಆದರೆ ಅದು ವಾಪಸ್ ಬಂದಿತ್ತು. ಈಗ ಈ ಯೋಜನೆಗೆ ಯಾವುದೇ ನ್ಯಾಯಾಲಯದಲ್ಲಿ ತಕರಾರು ಇಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಯಾವ ರೀತಿ ಸಮಸ್ಯೆಯಾಗುತ್ತಿದೆ, ಅಪಾರ್ಟ್ಮೆಂಟ್ ಗಳಲ್ಲಿ ಹೇಗೆ ಟ್ಯಾಂಕರ್ಗಳ ಮೂಲಕ ನೀರು ತರಿಸಿಕೊಳ್ಳಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲವರು ಇದನ್ನು ರಾಜಕಾರಣ ಎಂದು ಮಾತನಾಡುತ್ತಿದ್ದಾರೆ, ತೊಂದರೆ ಇಲ್ಲ. ಎಲ್ಲದರಲ್ಲೂ ರಾಜಕಾರಣ ಮಾತನಾಡುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ದಿನಕ್ಕೆ 15 ಕಿ.ಮೀ ದೂರ ನಡಿಗೆ:
ದಿನಕ್ಕೆ 15 ಕಿ.ಮೀ ದೂರ ಪಾದಯಾತ್ರೆ ನಡೆಯಲಿದೆ. ನೀವು ಒಂದು ದಿನವಾದರೂ ನಡೆಯಿರಿ ಅಥವಾ 10 ದಿನವಾದರೂ ನಡೆಯಿರಿ, ಅರ್ಧ ದಿನವಾದರೂ ನಡೆಯಿರಿ. ಕೊನೇ ದಿನದ ಕಾರ್ಯಕ್ರಮ ಬಸವನಗುಡಿಯಲ್ಲಿ ನಡೆಯಲಿದೆ. ಇದು ಕಾಂಗ್ರೆಸ್ ಪಕ್ಷವೊಂದರ ಕಾರ್ಯಕ್ರಮವಲ್ಲ. ನಾವು ಎಲ್ಲ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳನ್ನು ಆಹ್ವಾನಿಸುತ್ತೇವೆ. ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮಿಗಳ ಮಠಕ್ಕೆ ಹೋಗಿ ನಿರ್ಮಲಾನಂದ ಸ್ವಾಮೀಜಿ ಅವರನ್ನು ಆಹ್ವಾನಿಸಿದ್ದು, ಅವರು ಆಗಮಿಸುವುದಾಗಿ ತಿಳಿಸಿದ್ದಾರೆ. ಸಿದ್ದಗಂಗಾ ಶ್ರೀಗಳು ಸೇರಿದಂತೆ ಎಲ್ಲ ಶ್ರೀಗಳು ಹಾಗೂ ಧರ್ಮ ಪೀಠದ ಮುಖ್ಯಸ್ಥರನ್ನು ಭೇಟಿ ಮಾಡುತ್ತಿದ್ದೇವೆ. ವಾಣಿಜ್ಯ ಮಂಡಳಿಗೆ ಮುಂಚಿತವಾಗಿ ಬಂದು ಆಹ್ವಾನಿಸುತ್ತಿದ್ದೇನೆ. ಜನರ ಮೇಲೆ ಪ್ರೀತಿ, ವಿಶ್ವಾಸ ಇದ್ದವರು ಬರಲಿ. ಯಾರಿಗೂ ಬರಲೇಬೇಕು ಎಂದು ಬಲವಂತ ಮಾಡುವುದಿಲ್ಲ. ನಾನು ಈ ರಂಗಕ್ಕೆ ಹೊಸಬನಲ್ಲ. ರಾಜ್ಯದ ಹಿತಕ್ಕಾಗಿ ಈ ಹೋರಾಟ ಮಾಡುತ್ತಿದ್ದು, ತಾವೆಲ್ಲ ಭಾಗವಹಿಸಬೇಕು ಎಂದರು.
ಈ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷರಾದ ಗಣೇಶ್, ಬಣಕಾರ್, ನಾಗಣ್ಣ, ಬಾಬ್ಜಿ, ಕಾರ್ಯದರ್ಶಿ ಎಂ.ಎನ್. ಸುರೇಶ್, ಖಜಾಂಚಿ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ, ಸಾ.ರಾ. ಗೋವಿಂದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಂದರರಾಜ್ ಉಪಸ್ಥಿತರಿದ್ದರು.