ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದಕ್ಕೆ ಸಂಪುಟ ಪುನರ್ರಚನೆಯೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಈ ಸರ್ಕಾರದ ಶೋಚನೀಯ ವೈಫಲ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ ಕ್ಯಾಬಿನೆಟ್ ಪುನರ್ ರಚನೆಯೇ ಸಾಕ್ಷಿ. ಆರೋಗ್ಯ ಸಚಿವರನ್ನೂ ಬದಲಾಯಿಸಲಾಗಿದೆ ಎಂಬ ಅಂಶವು ಸರ್ಕಾರದ ಅಸಮರ್ಥತೆಯು ಅಪಾರ ಪ್ರಮಾಣದ ಜೀವ ಹಾನಿಗೆ ಕಾರಣವಾಗಿದೆ ಎಂಬ ನಮ್ಮ ಆರೋಪಕ್ಕೆ ಬಲ ತುಂಬಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ. ಸೂಕ್ತ ಸಿದ್ಧತೆ ಹಾಗೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಲಾಕ್ಡೌನ್ ಘೋಷಣೆಯಲ್ಲೂ ವಿಫಲವಾದ ಸರ್ಕಾರ ಕೋವಿಡ್ ಸಲಕರಣೆಗಳ ಖರೀದಿಯಲ್ಲಿ ದೊಡ್ಡ ಅವ್ಯವಹಾರವನ್ನು ಮಾಡಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಇದೆಲ್ಲವನ್ನೂ ನಾವು ಪ್ರಶ್ನಿಸಿದ ಸಂದರ್ಭ ಸರ್ಕಾರ ಸೂಕ್ತ ಉತ್ತರ ನೀಡಿಲ್ಲ. ನಾವು ಕೊಟ್ಟ ಸಲಹೆ-ಸೂಚನೆಗಳನ್ನು ಪಾಲಿಸಿಲ್ಲ ಎಂದಿದ್ದರು. ಇದೀಗ ಸಂಪುಟ ಪುನರ್ರಚನೆ ಕಾಂಗ್ರೆಸ್ ನಾಯಕರಿಗೆ ಮಾತನಾಡಿಕೊಳ್ಳಲು ಇನ್ನೊಂದು ಮಹತ್ವದ ವಿಷಯವಾಗಿದೆ.