ಬೆಂಗಳೂರು : ನನಗೆ ಯಾವ ಉತ್ಸವವೂ ಬೇಡ. ವ್ಯಕ್ತಿ ಪೂಜೆ ಬದಲು ಪಕ್ಷದ ಪೂಜೆ ಮಾಡಿ. ಯಾವುದೇ ಕಾರ್ಯಕ್ರಮ ಪಕ್ಷದ ಸಂಘಟನೆಗಾಗಿ. ಆದರೆ ಅದರಿಂದ ಪಕ್ಷಕ್ಕೆ ಒಳ್ಳೆಯದು, ಅಂತಹ ಸಭೆಗಳಿಗೆ ನನ್ನ ಬೆಂಬಲವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿದ್ದರಾಮಯ್ಯ 75 ಅಮೃತ ಮಹೋತ್ಸವಕ್ಕೆ ಡಿಕೆಶಿ-23 ಉತ್ಸವ ಕೌಂಟರ್ ಆಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಜನ್ಮ ದಿನವನ್ನೇ ಆಚರಿಸಿಕೊಂಡಿಲ್ಲ. ನಾನು ಅಧಿಕಾರಕ್ಕೆ ಬಂದಾಗಲೇ ಹೇಳಿದ್ದೇನೆ ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆಮಾಡಿ ಎಂದು. ಇವತ್ತು ಅದನ್ನೇ ಹೇಳುತ್ತೇನೆ. ನನಗೆ ಪಾರ್ಟಿ ಉತ್ಸವ ಬೇಕು. ವಿಧಾನಸೌಧದಲ್ಲಿ ಪಾರ್ಟಿಯನ್ನು ಕೂರಿಸಬೇಕು ಎಂಬುದು ನನ್ನ ಕನಸಾಗಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ಕರೆದಿದ್ದಾರೆ, ನಾನು ಒಬ್ಬ ಪಾರ್ಟಿ ಪ್ರೆಸಿಡೆಂಟ್ ಆಗಿ ಭಾಗಿ ಆಗುತ್ತೇನೆ. ಇಂದು ಸ್ವಾತಂತ್ರ್ಯ ಉತ್ಸವದ ಬಗ್ಗೆ ಸಭೆ ಇದೆ. ಅದರಲ್ಲಿ ಭಾಗಿಯಾಗುತ್ತಿದ್ದೇನೆ. 3ನೇ ತಾರೀಖು ಕಾರ್ಯಕ್ರಮಕ್ಕೆ ಹೋಗುತ್ತೇನೆ. ನಾನೂ ಕೂಡ ಒಬ್ಬ ಗೆಸ್ಟ್. ರಾಹುಲ್ ಗಾಂಧಿ ಕೂಡ ಬರ್ತಿದ್ದಾರೆ ಎಂದರು.