ಬೆಂಗಳೂರು :ಕಳೆದ ಒಂದು ವರ್ಷದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಅನೇಕ ಬಾರಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡಿದರೆ ತಪ್ಪೇನು ಎಂದು ಮುಖ್ಯಮಂತ್ರಿಗಳೇ ಪ್ರೋತ್ಸಾಹ ನೀಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಸಮವಸ್ತ್ರ ತ್ಯಜಿಸಿ ಕೇಸರಿ ವಸ್ತ್ರ ಧರಿಸಿದರೂ ಸಿಎಂ, ಗೃಹಮಂತ್ರಿ ಸುಮ್ಮನಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪನವರು ಮೆರವಣಿಗೆ ಮೂಲಕ ಸಿಎಂ ಮನೆಗೆ ಬಂದು ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅವರು ಕೂಗಾಟ, ಚೀರಾಟ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದರು.
ಕಳೆದೊಂದು ವರ್ಷದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಬಿಜೆಪಿಯವರು ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.. ಹುಬ್ಬಳ್ಳಿ ಚರ್ಚ್ಗೆ ನುಗ್ಗಿ ಬಲವಂತವಾಗಿ ಭಜನೆ ಮಾಡಿದರು. ಅನ್ಯಧರ್ಮೀಯರು ಜಾತ್ರೆಗಳಲ್ಲಿ ವ್ಯಾಪಾರ ಮಾಡಬಾರದು ಎಂದು ನಿರ್ಬಂಧ ಹೇರಿದರು. ನಿನ್ನೆ ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಯನ್ನು ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ನಾವು ಅವರನ್ನು ಗೌರವಿಸುತ್ತೇವೆ, ಅಭಿನಂದಿಸುತ್ತೇವೆ ಎಂದರು.
ಮಠದ ಅನುದಾನಕ್ಕೂ 30% ಕಮೀಷನ್ :ಸಾರ್ವಜನಿಕ ಆಸ್ತಿಗಳ ಮೇಲೆ ಕಲ್ಲು ಎಸೆದು ಹಾನಿ ಮಾಡಲು ಇವರು ಯಾರು? ನಾನು ಹುಬ್ಬಳ್ಳಿಗೆ ಹೋಗುತ್ತೇನೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದು ಅವಶ್ಯಕ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗಬೇಕಾದರೆ ಇಂತಹ ಘಟನೆ ನಡೆಯಬಾರದು. ಮಾಧ್ಯಮಗಳ ವರದಿ ಪ್ರಕಾರ ಮಠಗಳಿಗೆ ನೀಡುವ ಅನುದಾನದಲ್ಲೂ ಶೇ.30ರಷ್ಟು ಕಮೀಷನ್ ಪಡೆಯಲಾಗುತ್ತಿದೆ. ಇದಕ್ಕೆಲ್ಲ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಪೊಲೀಸ್ ನೇಮಕಾತಿ ಅಕ್ರಮ : ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ಹಾಗೂ ಸಿಐಡಿ ತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ನಾನು, ಪ್ರಿಯಾಂಕ್ ಖರ್ಗೆ ಅಭ್ಯರ್ಥಿಗಳ ಜತೆ ಮಾತನಾಡಿದ್ದೇವೆ. ನಾನು ಇಂಧನ ಸಚಿವ ಆಗಿದ್ದಾಗ 30-40 ಸಾವಿರ ಹುದ್ದೆಗಳ ಭರ್ತಿ ಮಾಡಿದ್ದು, ದೈಹಿಕ ಪರೀಕ್ಷೆಯನ್ನು ವಿಡಿಯೋ ಮಾಡಿಸಿದ್ದೆ. ಒಬ್ಬರೂ ನಮ್ಮ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿಲ್ಲ. ನನ್ನ ಕ್ಷೇತ್ರದವರಿಗೆ ಲೈನ್ ಮ್ಯಾನ್ ಕೆಲಸ ಕೊಡಿಸಲು ಆಗಲಿಲ್ಲ, ಅಷ್ಟು ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿತ್ತು.
ಈ ನೇಮಕಾತಿ ಪರೀಕ್ಷೆಯಲ್ಲಿ 21 ಪ್ರಶ್ನೆಗೆ ಉತ್ತರ ಬರೆದ ಅಭ್ಯರ್ಥಿಗೆ 7ನೇ ರಾಂಕ್ ನೀಡಲಾಗಿದೆ. ಅದರ ದಾಖಲೆಗಳು ನನ್ನ ಬಳಿ ಇವೆ. 52 ಸಾವಿರ ಯುವಕರು ಪರೀಕ್ಷೆ ಬರೆದಿದ್ದಾರೆ. ಇಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಗೃಹಮಂತ್ರಿಗಳು ಅಕ್ರಮ ನಡೆದಿಲ್ಲ ಎಂದು ಹೇಳಿಯೂ ಸಿಐಡಿ ತನಿಖೆ ಮಾಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:ಈಶ್ವರಪ್ಪ ವಿರುದ್ಧ ಪ್ರತಿಭಟನೆ : ಸಿದ್ದು, ಡಿಕೆಶಿ, ಸುರ್ಜೇವಾಲಾ ಸೇರಿದಂತೆ 36 ಕಾಂಗ್ರೆಸ್ ನಾಯಕರ ಮೇಲೆ FIR