ಬೆಂಗಳೂರು:ಜಾರಿ ನಿರ್ದೇಶನಾಲಯದ ಚಾರ್ಜ್ಶೀಟ್ನಲ್ಲಿ ಹೊಸದಾಗಿ ಏನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ವಿರುದ್ಧ ಮತ್ತೆ ದಾಖಲಾದ ದೂರಿನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನ್ಯಾಯ, ನೀತಿ, ಸತ್ಯ, ಧರ್ಮ ಕಾನೂನು ಎಲ್ಲದರಲ್ಲೂ ನನಗೆ ನಂಬಿಕೆ ಇದೆ. ನಾನು ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ ಎಂದರು.
ಬಿಜೆಪಿಗೆ ಯಾರಿಂದ ರಾಜಕೀಯವಾಗಿ ತೊಂದರೆ ಇದೆ. ಅಂತಹವರನ್ನ ನಿರ್ನಾಮ ಮಾಡುವ ಕೆಲಸ ಮಾಡುತ್ತಿದೆ. ಅವರ ಜೊತೆ ಹೋಗಬೇಕು, ಇಲ್ಲ ಅವರಿಗೆ ಶರಣಾಗಬೇಕು. ಅದು ಸಾಧ್ಯವಿಲ್ಲ. ಹೀಗಾಗಿ ನಾನು ಫೇಸ್ ಮಾಡ್ತೇನೆ. ಅವರು ಚಾರ್ಜ್ಶೀಟ್ ಫೈಲ್ ಮಾಡಿರೋದು ಮಾಧ್ಯಮದಲ್ಲಿ ಗೊತ್ತಾಯ್ತು. ನಮಗೆ ಇನ್ನೂ ಕಾಪಿ ಸಿಕ್ಕಿಲ್ಲ. ಸಾಮಾನ್ಯವಾಗಿ 6 ತಿಂಗಳಲ್ಲಿ ಚಾರ್ಜ್ಶೀಟ್ ಫೈಲ್ ಮಾಡ್ತಾರೆ. ಬಹಳ ದೊಡ್ಡ ತನಿಖೆ ಮಾಡಿದ್ದಾರೆ. ಅವರು ಹೊಸದಾಗಿ ಏನನ್ನೂ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದರು.