ಬೆಂಗಳೂರು :ಸಚಿವ ಅಶ್ವತ್ಥ್ ನಾರಾಯಣ ಭೇಟಿ ಹೇಳಿಕೆ ವಿಚಾರವಾಗಿ ಸಿಟ್ಟಾದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇಂದು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರದಲ್ಲಿ ಭೇಟಿಯಾದರು.
ಈ ವೇಳೆ ಉಭಯ ನಾಯಕರು ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭ ಪ್ರತಿಪಕ್ಷ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದರು. ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಕೇಳಿಬಂದ ಆರೋಪದಿಂದ ಮುಕ್ತಗೊಳ್ಳಲು ಎಂ ಬಿ ಪಾಟೀಲ್ರನ್ನು ಭೇಟಿಯಾಗಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಇದು ಎಂ ಬಿ ಪಾಟೀಲ್ರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಡಿಕೆಶಿ ಹೇಳಿಕೆ ವಿರುದ್ಧ ಪಾಟೀಲರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅಶ್ವತ್ಥ್ ನಾರಾಯಣರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಅಲ್ಲದೇ, ಮಾಜಿ ಸಂಸದೆ, ನಟಿ ರಮ್ಯಾ ಕೂಡ ಈ ಬಗ್ಗೆ ಡಿಕೆಶಿ ವಿರುದ್ಧ ಸರಣಿ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದರು. ಎಂ.ಬಿ. ಪಾಟೀಲ್ ಬೆಂಬಲಕ್ಕೆ ನಿಂತಿದ್ದರು. ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೊಳಬೇಕಾಯಿತು. ಜೊತೆಗೆ ಉಭಯ ನಾಯಕರ ಮಧ್ಯೆ ತಿಕ್ಕಾಟ ಶುರುವಾಗಿತ್ತು.