ಬೆಂಗಳೂರು:ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಮಗು ಸೇರಿದಂತೆ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಅತ್ತಿಗುಪ್ಪೆ ಬಳಿಯ ಮನೆಯೊಂದರಲ್ಲಿ ನಡೆದಿದೆ.
ಸುಕುಮಾರ್(48), ಹರ್ಷಾ(41), ಘನಶ್ರೀ (13), ಹೇಮೇಶ್ವರ್ (7), ಮನೆ ಮಾಲೀಕರಾದ ರಾಮಕ್ಕ (65), ಅನಿತಾ(31), ರಚನಾ(21) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಇಎಸ್ಐ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳಲ್ಲಿ ಆಗಮಿಸಿದ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಪಶ್ಚಿಮ ವಿಭಾಗದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರ್ಘಟನೆಯ ಹಿನ್ನೆಲೆ:
ಬಾಡಿಗೆ ಮನೆಯಲ್ಲಿದ್ದ ಹರ್ಷಾ ರಾತ್ರಿ ಅಡಿಗೆ ಕೋಣೆಗೆ ತೆರಳಿದಾಗ ಸಿಲಿಂಡರ್ ಸೋರಿಕೆ ಬಗ್ಗೆ ಗೊತ್ತಾಗಿದೆ. ತಕ್ಷಣ ಮನೆಯ ಸದಸ್ಯರು ಗಾಬರಿಗೊಂಡು ಅಡುಗೆಕೋಣೆ ತಪಾಸಣೆ ಮಾಡಿದ್ದಾರೆ. ಆ ಸಮಯದಲ್ಲಿ ಅದೇ ಬಿಲ್ಡಿಂಗ್ನ ಒಂದನೇ ಮಹಡಿಯಲ್ಲಿ ವಾಸವಿರುವ ಮಾಲೀಕರ ಕುಟುಂಬ ಏನಾಯಿತು ಎಂದು ನೋಡಲು ಹೊರಗೆ ಬಂದಿದ್ದಾರೆ.
ನೋಡ ನೋಡುತ್ತಿದ್ದಂತೆ ಸಿಲಿಂಡರ್ ಲೀಕೇಜ್ ಹೆಚ್ಚಾಗಿ ದೇವರ ಮನೆಯಲ್ಲಿ ಉರಿಯುತ್ತಿದ್ದ ದೀಪಕ್ಕೆ ತಗುಲಿ ತಕ್ಷಣ ಸ್ಪೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆಯಿಂದ ಏಳು ಮಂದಿಗೆ ಮುಖ, ತಲೆ, ಕೈಕಾಲುಗಳಿಗೆ ಸುಟ್ಟಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.