ಬೆಂಗಳೂರು: ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಮಗು ಸೇರಿದಂತೆ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಅತ್ತಿಗುಪ್ಪೆ ಬಳಿಯ ಮನೆಯೊಂದರಲ್ಲಿ ನಿನ್ನೆ ರಾತ್ರಿ ನಡೆದಿತ್ತು. ಕುಟುಂಬಸ್ಥರ ಎಚ್ಚರಿಕೆ ನಡೆಯಿಂದ ಸಂಭವನೀಯ ದುರಂತ ತಪ್ಪಿದೆ.
ನಿನ್ನೆ ರಾತ್ರಿ ಗ್ಯಾಸ್ ಸೋರಿಕೆ ಅರಿತ ಸುಕುಮಾರ್ ಕುಟುಂಬ ಮನೆಯಿಂದ ಹೊರ ಬಂದಿತ್ತು. ಇದೇ ವೇಳೆ, ಮೊದಲ ಮಹಡಿಯಲ್ಲಿದ್ದ ಮಾಲೀಕರಾದ ರಾಮಕ್ಕ ಅವರ ಕುಟುಂಬ ಸಹ ಹೊರಗಡೆ ಬಂದಿದೆ. ನೋಡ ನೋಡುತ್ತಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದೆ. ಅಡುಗೆ ಮನೆಯ ಕಿಟಕಿಯಿಂದ ಹೊರಚಿಮ್ಮಿದ ಬೆಂಕಿಯ ಕೆನ್ನಾಲಿಗೆ ಕಟ್ಟಡದ ಗೇಟಿನ ಬಳಿ ನಿಂತಿದ್ದ 7 ಜನರಿಗೂ ತಾಗಿ ಸಣ್ಣಪುಟ್ಟ ಗಾಯವಾಗಿತ್ತು. ಕೊನೆ ಕ್ಷಣದಲ್ಲಿ ಕುಟುಂಬ ಎಚ್ಚರಿಕೆ ವಹಿಸಿ ಮನೆಯಿಂದ ಹೊರ ಬಂದಿದ್ದು, ಎಲ್ಲರೂ ಬದುಕುಳಿದಿದ್ದಾರೆ. ಈ ಸಿಲಿಂಡರ್ ಸ್ಫೋಟದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.