ಬೆಂಗಳೂರು:ಇತ್ತೀಚೆಗೆ ಹಂಪಿ ನಗರದ ಮನೆಯೊಂದರಲ್ಲಿ ನಡೆದಿದ್ದ ನಿಗೂಢ ಸ್ಫೋಟ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಮಾಗಡಿ ರಸ್ತೆಯಲ್ಲಿರುವ ಎಂ.ಎಂ.ಫುಡ್ ಸ್ಟ್ರೀಟ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು, ಘಟನೆಯಲ್ಲಿ ಬಿಹಾರ ಮೂಲದ ಮನೀಶ್ ಹಾಗೂ ಸೌರಭ್ ಮೃತಪಟ್ಟಿದ್ದಾರೆ.
ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ ಫ್ಯಾಕ್ಟರಿ ಪಾರ್ಟ್ನರ್ ಸಚಿನ್ಗೆ ಗಂಭೀರ ಗಾಯಗಳಾಗಿವೆ. ಅಗ್ನಿ ಅವಘಡದಲ್ಲಿ ಶಾಂತಿ, ಧನಲಕ್ಷ್ಮೀ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಬಾಯ್ಲರ್ ಸ್ಫೋಟದ ತೀವ್ರತೆಗೆ ಸಿಲಿಂಡರ್ ಬ್ಲಾಸ್ಟ್!
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಮಾತನಾಡಿ, ಆಹಾರ ತಯಾರಿಸುವ ಬಾಯ್ಲರ್ ಹೆಚ್ಚು ಹೀಟ್ ಆಗಿ ಸ್ಫೋಟಗೊಂಡ ಪರಿಣಾಮ ಸಿಲಿಂಡರ್ ಕೂಡಾ ಸ್ಫೋಟವಾಗಿದೆ. ಘಟನೆಯಲ್ಲಿ ಮನೀಶ್ ಹಾಗೂ ಸೌರಬ್ ಎಂಬುವವರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಗೋಪಾಲಪುರ ಚಿಕ್ಕ ಪ್ರದೇಶವಾಗಿದ್ದು, ವಸತಿ ಪ್ರದೇಶದಲ್ಲಿ ಫ್ಯಾಕ್ಟರಿ ಪ್ರಾರಂಭ ನಡೆಸಲು ಪರವಾನಗಿ ಪಡೆದಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾಗಡಿ ರಸ್ತೆಯಲ್ಲಿರುವ ಎಂ.ಎಂ.ಪುಡ್ ಸ್ಟ್ರೀಟ್ ಫ್ಯಾಕ್ಟರಿ ಎಂ.ಎಂ.ಫುಡ್ ಸ್ಟ್ರೀಟ್ ಕಾರ್ಖಾನೆಯಲ್ಲಿ ಖಾರ ಬೂಂದಿ ಸೇರಿದಂತೆ ಕುರುಕಲು ಪದಾರ್ಥಗಳನ್ನು ತಯಾರು ಮಾಡಲಾಗುತಿತ್ತು. ಫ್ಯಾಕ್ಟರಿಯಲ್ಲಿ 6 ರಿಂದ 8 ಜನರು ಕೆಲಸ ಮಾಡುತ್ತಿದ್ದರು. ತಯಾರಿಸಿದ ಪದಾರ್ಥಗಳನ್ನು ನಿತ್ಯವೂ ನಗರದ ಹಲವು ಕಡೆ ಮಾರಾಟ ಮಾಡುತ್ತಿದ್ದರು.
ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲರೂ ಮಾಗಡಿ ರಸ್ತೆಯ ಗೋಪಾಲಪುರ ನಿವಾಸಿಗಳಾಗಿದ್ದಾರೆ. ಫ್ಯಾಕ್ಟರಿ ಮಾಲೀಕ ವಿಜಯ್ ಕೆಲ ವರ್ಷಗಳಿಂದ ಕುರುಕಲು ತಿಂಡಿ ತಯಾರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಎಂದಿನಂತೆ ಇಂದು ಮಧ್ಯಾಹ್ನ ಕೆಲಸ ಮಾಡುವಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಕಾರ್ಮಿಕ ಮನೀಶ್ ಎಂಬಾತ ಸ್ಥಳದಲ್ಲೇ ಸಜೀವ ದಹನಗೊಂಡರೆ, ಮತ್ತೋರ್ವ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಮಾಹಿತಿ ಆಧರಿಸಿ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ. ಘಟನಾ ಸ್ಥಳದಲ್ಲಿ 10 ರಿಂದ 15 ಸಿಲಿಂಡರ್ಗಳಿದ್ದವು ಎಂದು ಹೇಳಲಾಗಿದೆ.
ಘಟನೆಗೆ ಕಾರಣವೇನು?:ಜನ ವಸತಿ ಪ್ರದೇಶವಾದ ಗೋಪಾಲಪುರದಲ್ಲಿ ಕಳೆದ ಎರಡು ವರ್ಷಗಳಿಂದ ಆಹಾರ ಉತ್ಪಾದಕ ಘಟಕದಲ್ಲಿ ಪ್ರತಿದಿನ ದೊಡ್ಡ ಮಟ್ಟದಲ್ಲಿ ಜಂಕ್ ಫುಡ್ ತಯಾರಿಸಿ ಬೇರೆ ಬೇರೆ ಅಂಗಡಿಗಳಿಗೆ ಆಹಾರ ಮಾರಾಟ ಮಾಡಲಾಗುತಿತ್ತು.
ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ ದುರಂತ ಇಕ್ಕಟ್ಟಾದ ಪ್ರದೇಶದಲ್ಲಿ ಫ್ಯಾಕ್ಟರಿಯಿದ್ದ ಕಾರಣ ಸುಗಮವಾಗಿ ಗಾಳಿ - ಬೆಳಕಿನ ವ್ಯವಸ್ಥೆಯೂ ಇರಲಿಲ್ಲ. ನಿಗದಿಗಿಂತ ಹೆಚ್ಚಿನದಾಗಿ ಲೋಡ್ ಆಗಿದ್ದರಿಂದ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಸಿಲಿಂಡರ್ಗೂ ಬೆಂಕಿ ತಗುಲಿ ಬ್ಲಾಸ್ಟ್ ಆಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿಯಲು ಎಫ್ಎಸ್ಎಲ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಾರೆ. ಅಲ್ಲದೇ ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮೂವರ ವಿರುದ್ಧ ಪ್ರಕರಣ ದಾಖಲು:ದುರ್ಘಟನೆ ಸಂಬಂಧ ಕಟ್ಟಡದ ಮಾಲೀಕ ಹಾಗೂ ಎಂ.ಎಂ.ಫುಡ್ ಫ್ಯಾಕ್ಟರಿ ಮಾಲೀಕರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಟ್ಟಡದ ಮಾಲೀಕ ನರೇಂದ್ರ, ಫ್ಯಾಕ್ಟರಿ ಮಾಲೀಕರಾದ ವಿಜಯ್ ಮೆಹ್ತಾ ಹಾಗೂ ಸಚಿನ್ ವಿರುದ್ಧ ಮಾಗಡಿ ರೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳ ಹೇಳಿಕೆ ಪಡೆದ ಬಳಿಕ ಹೆಚ್ಚುವರಿ ಸೆಕ್ಷನ್ ಸೇರ್ಪಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎಂ.ಎಂ.ಪುಡ್ ಸ್ಟ್ರೀಟ್ ಫ್ಯಾಕ್ಟರಿ