ಬೆಂಗಳೂರು:ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತಂತ್ರಜ್ಞಾನದ ದುರ್ಬಳಕೆ ಪ್ರಮಾಣವೂ ಹೆಚ್ಚಾಗುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ಶರವೇಗದಲ್ಲಿ ಸೈಬರ್ ಅಪರಾಧಗಳು ಒಂದೇ ಸಮನೆ ಏರಿಕೆ ಆಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಸೈಬರ್ ಕ್ರೈಂ ನಡೆಯುವ ನಗರಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿರುವುದು ವಿರ್ಪಯಾಸ. ದೇಶ ಅಥವಾ ಯಾವುದೇ ನಗರದಲ್ಲಿ ಕುಳಿತು ಸೈಬರ್ ಅಪರಾಧ ಎಸಗುವ ವಂಚಕರ ವಿರುದ್ಧ ರಾಜ್ಯದಲ್ಲಿ ಸಾವಿರಾರು ಪ್ರಕರಣಗಳ ದಾಖಲಾದರೂ ನೂರಾರು ಸಂಖ್ಯೆಯಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಹಿಂದುಳಿಯಲು ಸಿಬ್ಬಂದಿ ಕೊರತೆ, ಮೂಲಸೌಕರ್ಯ ಕೊರತೆ, ತಾಂತ್ರಿಕ ಕೌಶಲ ತರಬೇತಿ ಇಲ್ಲದಿರುವುದು, ಸಮನ್ವಯ ಕೊರತೆಯಿಂದಾಗಿ ಮುಂತಾದ ಕಾರಣಗಳನ್ನು ನೀಡಬಹುದಾಗಿದೆ.
ಕಳೆದ ವರ್ಷ ರಾಜ್ಯದಲ್ಲಿ 12,041 ಸಾವಿರ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಆದರೆ, ಪತ್ತೆ ಹಚ್ಚಿದ್ದು193 ಕೇಸ್ಗಳನ್ನು ಮಾತ್ರ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಕಮಿಷನರೇಟ್ ವ್ಯಾಪ್ತಿ ಸೇರಿ ಒಟ್ಟು 35 ವಿಭಾಗಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಅಚ್ಚರಿಯ ವಿಚಾರ ಎಂದರೆ 27 ವಿಭಾಗಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ ಒಂದೇ ಒಂದು ಪ್ರಕರಣವನ್ನು ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿರುವ ಅಪರಾಧಗಳ ಕುರಿತಂತೆ ಅಂತರ್ಜಾಲ, ಜಾಲತಾಣ ಕಂಪನಿಗಳ ಅಸಹಕಾರ, ದೀರ್ಘಾವಧಿ ಪತ್ರ ವ್ಯವಹಾರ ಒಂದೆಡೆಯಾದರೆ ಪೊಲೀಸರ ತನಿಖೆಯಲ್ಲಿ ಅವೈಜ್ಞಾನಿಕತೆ, ಸೈಬರ್ ಕ್ರೈಂ ಕುರಿತಂತೆ ಪೊಲೀಸ್ ಸಿಬ್ಬಂದಿಗೆ ಜ್ಞಾನ, ಕೌಶಲ್ಯ ಹಾಗೂ ತರಬೇತಿ ಕೊರತೆಯಿಂದ ಪ್ರಕರಣಗಳು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಅಪರಾಧ ದಾಖಲಾತಿ ಘಟಕ (ಎಸ್ಸಿಆರ್ಬಿ) ಮಾಹಿತಿ ಪ್ರಕಾರ ರಾಜ್ಯದಲ್ಲಿ ಸೈಬರ್ ಕ್ರೈಂ ದಾಖಲಾಗುವ ಪ್ರಕರಣಗಳಲ್ಲಿ ಶೇಕಡಾ 0.6ರಷ್ಟನ್ನು ಮಾತ್ರ ಭೇದಿಸಲು ಪೊಲೀಸರಿಂದ ಸಾಧ್ಯವಾಗುತ್ತಿದೆ.
18 ಸಾವಿರ ಕೇಸ್ಗಳಲ್ಲಿ 8 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ