ಬೆಂಗಳೂರು:ಆನ್ಲೈನ್ನಲ್ಲಿ ಸ್ಮಾರ್ಟ್ಫೋನ್ಗಾಗಿ ಮಾಡಿದ ಆರ್ಡರ್ ರದ್ದಾಗಿದ್ದು, ರಿಫಂಡ್ ಮಾಡುವ ನೆಪದಲ್ಲಿ ಹಿರಿಯ ನಾಗರಿಕರೊಬ್ಬರ ಬ್ಯಾಂಕ್ ಅಕೌಂಟ್ನಿಂದ ಖದೀಮರು ಲಕ್ಷಾಂತರ ರೂಪಾಯಿ ದೋಚಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ 61 ವರ್ಷದ ಶ್ರೀಕಾಂತ್ ಸ್ವಾಮಿ ಎಂಬುವವರು 2 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ಫೋನ್ ಅನ್ನು ಪೇ ಯು ಮನಿ ಮೂಲಕ ಆರ್ಡರ್ ಮಾಡಿದ್ದರು.
ಕೆಲ ದಿನಗಳ ಬಳಿಕ 9939813598 ನಂಬರ್ನಿಂದ ಕಸ್ಟಮರ್ ಕೇರ್ ಸೋಗಿನಲ್ಲಿ ಕರೆ ಮಾಡಿದ ಖದೀಮರು, ಕೊರೊನಾ ಕಾರಣಕ್ಕಾಗಿ ಬುಕ್ ಮಾಡಿರುವ ಸ್ಮಾರ್ಟ್ ಫೋನ್ ಖುದ್ದು ನೀಡಲು ಸಾಧ್ಯವಿಲ್ಲ. ಆರ್ಡರ್ ರದ್ದು ಮಾಡಿದ್ದು ನಿಮ್ಮ ಹಣ ರಿಫಂಡ್ ಮಾಡಲು ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ ಲೋಡ್ ಮಾಡಿ ಬ್ಯಾಂಕಿನ ವಿವರ ನಮೂದಿಸುವಂತೆ ಸೂಚನೆ ನೀಡಿದ್ದಾರೆ.
ಖದೀಮರ ವಂಚನೆಯನ್ನು ಅರಿಯದ ಗ್ರಾಹಕ ಶ್ರೀಕಾಂತ್ ಆ್ಯಪ್ ಡೌನ್ ಲೋಡ್ ಮಾಡಿ ಬ್ಯಾಂಕ್ ಖಾತೆಯ ಮಾಹಿತಿ ತುಂಬಿದ್ದಾರೆ. ಕೆಲ ಹೊತ್ತಿನ ಬಳಿಕ ರಿಫಂಡ್ ಹಣ ಬರಲಿದೆ ಎಂದು ಹೇಳಿ ಪೋನ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಬಳಿಕ ಆನ್ಲೈನ್ ಮುಖಾಂತರವೇ ಹಂತ ಹಂತವಾಗಿ 1,87,911 ರೂಪಾಯಿ ಹಣವನ್ನು ಸುಮಾರು 16 ಬಾರಿ ಬ್ಯಾಂಕ್ ಟ್ರಾನ್ಸಾಕ್ಷನ್ ನಡೆಸಿ ಖದೀಮರು ಹಣ ದೋಚಿದ್ದಾರೆ.
ಈ ಕುರಿತು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.