ಮನೆಯಲ್ಲಿ ಕುಳಿತು ಸಂಘದ ಬಗ್ಗೆ ಓದಿದ್ರೆ ಸಾಲದು, ಶಾಖೆಗೆ ಬಂದು ಸಂಶೋಧಿಸಿ: ಹೆಚ್ಡಿಕೆಗೆ ಸಿಟಿ ರವಿ ಟಾಂಗ್ - ಹೆಚ್ಡಿಕೆಗೆ ಸಿಟಿ ರವಿ ಟಾಂಗ್
ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ತಿರಗೇಟು ನೀಡಿದ್ದಾರೆ.
ಬೆಂಗಳೂರು:ಆರ್ಎಸ್ಎಸ್ ಬಗ್ಗೆ ಅಧ್ಯಯನ ಮಾಡಿದ್ದೇನೆ. ಸಂಘದ ಐಡಿಯಾಲಜಿಗಳ ಬಗ್ಗೆ ನಿರಂತರವಾಗಿ ಓದುತ್ತಿದ್ದೇನೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಂಘದ ಬಗ್ಗೆ ಸಂಪೂರ್ಣ ಜ್ಞಾನ ಕರಗತ ಮಾಡಿಕೊಳ್ಳಬೇಕಾದರೆ ಮನೆಯಲ್ಲಿ ಕುಳಿತು ಸಂಘದ ಬಗ್ಗೆ ಅದರ ಕಾರ್ಯಗಳ ಬಗ್ಗೆ ಓದಿದರೆ ಸಾಲದು. ಆರ್ಎಸ್ಎಸ್ ಶಾಖೆಗೆ ಬಂದು ಅಧ್ಯಯನ, ಸಂಶೋಧನೆ ಮಾಡಿ. ಆಗ ಸಂಘದ ಧೋರಣೆಗಳು ಏನು ಎಂದು ತಿಳಿಯುತ್ತದೆ ಎಂದು ಮಾಜಿ ಸಿಎಂಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಆರ್ಎಸ್ಎಸ್ಗೆ ಯಾವುದೇ ಐಡಿಯಾಗಳಿಲ್ಲ. 'ನಾವು ಸಹ ಹಿಂದೂಗಳೇʼ ಎಂದು ಹೇಳಿರುವ ಕುಮಾರಸ್ವಾಮಿ ಅವರಿಗೆ ಆರ್ಎಸ್ಎಸ್ ಹಿಂದುತ್ವದ ಮೇಲೆ ಏಕೆ ಅನುಮಾನ. ಆರ್ಎಸ್ಎಸ್ ದೇಶ ಭಕ್ತ ಸಂಘಟನೆಯೇ ವಿನಾ ದೇಶವನ್ನು ಒಡೆಯುವ ಕೆಲಸ ಮಾಡುವುದಿಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಅಧಿಕಾರಕ್ಕಾಗಿ ಜೋತು ಬೀಳುವ ಪಕ್ಷ ನಮ್ಮದಲ್ಲ. ದೇಶ ಸೇವೆಗಾಗಿ ಸದಾ ಸಿದ್ಧರಿದ್ದೇವೆ. ಕೆಲವರ ಕೃಪಕಟಾಕ್ಷದಿಂದ 1989ರಲ್ಲಿ ಕೆಎಎಸ್‍ನಿಂದ ಐಎಎಸ್‍ಗೆ ಬಡ್ತಿ ಪಡೆದಿದ್ದ ಅಧಿಕಾರಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ 2007ರಲ್ಲಿ ನೇಮಿಸಿ ಕೈಗೊಂಬೆಯನ್ನಾಗಿ ಮಾಡಿಕೊಂಡು ಮಾಡಬಾರದ ಅಕ್ರಮಗಳನ್ನು ಮಾಡಿದ್ದು ನಿಮಗೆ ನೆನಪಿಲ್ಲವೇ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
2016ರಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ಕೊಟ್ಟು 676 ಅಭ್ಯರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂದು ಹೇಳುತ್ತಿದ್ದೀರಲ್ಲ. ಹಾಗಾದರೆ ನೀವು ಸಿಎಂ ಆಗಿದ್ದಾಗ ಕೆಪಿಎಸ್‍ಸಿ ಮೂಲಕ ನೇಮಕವಾಗಿದ್ದ ಎಲ್ಲರೂ ಜೆಡಿಎಸ್ ಕಾರ್ಯಕರ್ತರು ಎಂದು ಒಪ್ಪಿಕೊಳ್ಳುವಿರಾ? ಎಂದು ಕೇಳಿದ್ದಾರೆ. ಭ್ರಷ್ಟರನ್ನು ತಮ್ಮ ಮನೆಯ ಸುತ್ತ ಬೆಳೆಸಿಕೊಂಡು ಬೇರೆಯವರ ಬಗ್ಗೆ ಮಾತನಾಡುವುದು ನಿಮಗೆ ಶೋಭೆ ತರುತ್ತದೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ರಾಜಕೀಯ ಕಾರಣಕ್ಕಾಗಿ ನೀವು ಆರ್ಎಸ್ಎಸ್ ದೂಷಿಸಬೇಡಿ. ಆರ್ಎಸ್ಎಸ್ ಬದ್ಧತೆಯ ಬಗ್ಗೆ ಮಾತನಾಡುವ ಮೊದಲು ಸಂಘದ ಶಾಖೆಗೆ ಬಂದು ಇಲ್ಲಿಯ ಸಿದ್ಧಾಂತಗಳ ಅಧ್ಯಯನ ಮಾಡಿ. ಆಗ ನಿಮಗೆ ಆರ್ಎಸ್ಎಸ್ ಎಂದರೇನು? ಅದರ ಮಹತ್ವ ಏನು ಎಂಬುದು ಅರ್ಥವಾಗಬಹುದು ಎಂದು ತಿಳಿಸಿದ್ದಾರೆ.
ಚುನಾವಣೆ ಬಂದಾಗ ಜನರ ಸಂಕಷ್ಟಗಳು ನಿಮಗೆ ನೆನಪಾಗುವುದು ಹೊಸದೇನಲ್ಲ. ಆರ್ಎಸ್ಎಸ್ ಕಾರ್ಯಕರ್ತರು ಸಂಕಷ್ಟದಲ್ಲಿರುವ ಜನರ ಮಧ್ಯೆಯೇ ಬೆಳೆದು ಬಂದವರು. ಹೀಗಾಗಿ ಜನರ ಕಷ್ಟಗಳು, ನೋವುಗಳು ಏನೆಂದು ಅರಿವಿದೆ. ಸೈನಿಕರ ಬಗ್ಗೆ ಆರ್ಎಸ್ಎಸ್ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವ ಅವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ಕೋಟಿ ರೂ ವೇತನ ಕೊಟ್ಟರೂ ಸೈನ್ಯಕ್ಕೆ ಇವರ ಮಕ್ಕಳ ಸೇರಿಸಲ್ಲ:
ಕೆಲವರು ಸೈನ್ಯಕ್ಕೆ ಸೇರುವವರು ಹೊಟ್ಟೆ ಪಾಡಿಗಾಗಿ ಸೇರುತ್ತಾರೆʼ ಎಂದು ಮಾಜಿ ಮುಖ್ಯಮಂತ್ರಿಗಳು ಸೈನಿಕರನ್ನೇ ಅವಮಾನಿಸಿದ್ದರು. ಈ ದೇಶದ ಸೈನಿಕರ ಕಷ್ಟಗಳ ಬಗ್ಗೆ ಅವರಿಗೆ ಅರಿವಿಲ್ಲ. ಸೈನಿಕರಲ್ಲಿ ದೇಶ ಭಕ್ತಿಯಿರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ವ್ಯಕ್ತಿಗಳಿಗೆ ಸವಾಲು ಹಾಕಿ ಕೇಳುತ್ತೇನೆ. ಒಂದು ಕೋಟಿ ರೂಪಾಯಿ ಸಂಬಳ ಕೊಟ್ಟರೂ ಇವರ ಮಕ್ಕಳನ್ನು ಸೇನೆಗೆ ಸೇರಿಸಲಾರರು ಎಂದು ಹೆಚ್ಡಿಕೆ ವಿರುದ್ಧ ಸಿ.ಟಿ.ರವಿ ಹರಿಹಾಯ್ದಿದ್ದಾರೆ.
ಸೈನ್ಯಕ್ಕೆ ಸೇರಬೇಕಾದರೆ ದಿಲ್ಲು-ಧಮ್ಮು ಇರಬೇಕು. ಕೆಲ ಸಮಾಜಘಾತಕರು ಹೊಟ್ಟೆಪಾಡಿನ ವೃತ್ತಿ ಮಾಡುವ ಹೆಸರಲ್ಲಿ ತಲೆ ಹಿಡಿಯುವ ಕೆಲಸವನ್ನು ಮಾಡುತ್ತಾರೆ. ಸೈನ್ಯಕ್ಕೆ ಸೇರುವವರಿಗೆ ದೇಶ ಭಕ್ತಿಯಿರುತ್ತದೆ. ʼದೇಶಕ್ಕಾಗಿ ಪ್ರಾಣಕೊಡಲು ತಯಾರಿರುತ್ತಾರೆʼ ಅಂತಹವರನ್ನೂ ಅನುಮಾನಿಸಿದ ಇಂತಹವರು ಈ ಸಮಾಜದಲ್ಲಿರುವಾಗ ಯುಪಿಎಸ್‍ಸಿಯನ್ನು ಅನುಮಾನಿಸುವುದರಲ್ಲಿ ಅತಿಶಯೋಕ್ತಿಯಲ್ಲ ಎಂದಿದ್ದಾರೆ.