ಬೆಂಗಳೂರು/ಚಿಕ್ಕಮಗಳೂರು:ತಾಲಿಬಾನಿ ಉಗ್ರರ ಮನಸ್ಥಿತಿಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ ಹೇಳಿಕೆ ಕಾಂಗ್ರೆಸ್ ನಾಯಕರ ಮನಸ್ಥಿತಿಯ ಕನ್ನಡಿಯಾಗಿದೆ. 'ಟಿಪ್ಪು ಸುಲ್ತಾನ್ ನೆಲದಿಂದ ಬಂದವರು. ನಿಮಗೆ ತಲೆ ಕತ್ತರಿಸುವುದು ಗೊತ್ತಿದೆ ತಲೆ ತಗ್ಗಿಸುವುದು ಗೊತ್ತಿಲ್ಲ' ಎಂಬ ಹೇಳಿಕೆ ನಿಜಕ್ಕೂ ತಾಲಿಬಾನಿ ಮನಸ್ಥಿತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಅವರೇ ನೀವು ಎಂತಹ 'ಅದ್ಭುತ' ನಾಯಕರನ್ನು ಬೆಳೆಸುತ್ತಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಸಮ್ಮುಖದಲ್ಲೇ ತಲೆ ತೆಗೆಯುವ ಪ್ರಚೋದನಕಾರಿ ಹೇಳಿಕೆ ನೀಡಿದ ನಿಮ್ಮ ನಾಯಕನ ಮಾತಿಗೆ ನಿಮ್ಮ ಪ್ರತಿಕ್ರಿಯೆ ಏನು? ಇದೇನಾ ನಿಮ್ಮ ಕಾಂಗ್ರೆಸ್ ಸಂಸ್ಕೃತಿ? ಎಂದು ಟ್ವಿಟ್ ಮೂಲಕ ಪ್ರಶ್ನಿಸಿದ್ದಾರೆ.
ಉಗ್ರವಾದಿ ಮನಸ್ಥಿತಿಯ ವ್ಯಕ್ತಿಯನ್ನು ನಿಮ್ಮ ಪಕ್ಕ ಕೂರಿಸಿಕೊಂಡು ತಲೆ ತೆಗೆಯುವ ಹೇಳಿಕೆ ಕೊಟ್ಟಾಗ ಗಪ್‌ಚುಪ್ ಆಗಿದ್ದೀರಲ್ಲ? ಒಳಗೊಂದು ಹೊರಗೊಂದು ಮುಖವಾಡದ ಬದುಕು ಏಕೆ ? ಮಾತೆತ್ತಿದರೆ "ಸಾಮರಸ್ಯ ನಮ್ಮ ಸಿದ್ಧಾಂತ" ಎಂದು ಬೊಗಳೆ ಬಿಡುವ ನೀವುಗಳು ಇಮ್ರಾನ್ ಪ್ರತಾಪ್ ಘರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಿರಾ? ಅವರ ತಲೆಕತ್ತರಿಸುವ ತಾಲಿಬಾನಿ ಮಾತುಗಳನ್ನು ಬೆಂಬಲಿಸುವಿರಾ? ಎಂದು ರಾಜ್ಯದ ಜನತೆಗೆ ಸ್ಪಷ್ಟಪಡಿಸಿ, ಅವರ ಹೇಳಿಕೆಗೆ ನೀವು ಪ್ರತಿಕ್ರಿಯಿಸದಿದ್ದರೆ ಅದೇ ನಿಮ್ಮ ಪಕ್ಷ ಸಂಸ್ಕೃತಿಯ ದ್ಯೋತಕ ಎಂದು ಟೀಕಿಸಿದ್ದಾರೆ.