ಬೆಂಗಳೂರು: ಗೋವಾದಲ್ಲಿ ಸರ್ಕಾರ ರಚನೆಗೆ ಡಿಕೆಶಿ ವಿಶೇಷ ವಿಮಾನ ತೆಗೆದುಕೊಂಡು ಹೋದ್ರು. ಮೇಕೆದಾಟು ಸಂಬಂಧ ತಮಿಳುನಾಡು ಕಾಂಗ್ರೆಸ್ ನಾಯಕರ ಮನಪರಿವರ್ತನೆ ಮಾಡಲು ಒಂದು ವಿಶೇಷ ವಿಮಾನ ತೆಗೆದುಕೊಂಡು ಹೋಗಲು ಆಗಲ್ವಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಕಸ್ಮಾತ್ ಕಷ್ಟ ಆದರೆ ನಾನು ಯಾರದ್ದಾದರೂ ಕೈ ಕಾಲು ಹಿಡಿದು ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತೇನೆ. ನಿರ್ಣಯ ಹಿಂಪಡೆಯುವಂತೆ ಡಿಕೆಶಿ ಅವರು ಅಲ್ಲಿನ ಸಿಎಂ ಸ್ಟಾಲಿನ್, ಚಿದಂಬರಂ ಮನವೊಲಿಸಲಿ. ಇವರು ಸಂಪೂರ್ಣವಾಗಿ ತಮಿಳುನಾಡು ಕಾಂಗ್ರೆಸ್ ಮನವೊಲಿಸಿದರೆ, ಅಲ್ಲಿರುವ ಬಿಜೆಪಿ ಜತೆಗೆ ನಾನು ಮಾತನಾಡುತ್ತೇನೆ ಎಂದು ಸವಾಲು ಹಾಕಿದರು.
ಪ್ರಾಮಾಣಿಕ ಪಾದಯಾತ್ರೆ ಅಲ್ಲ: ಈಗ ಪಾದಯಾತ್ರೆ ಮಾಡಿದವರು ಯಾರು?, ಕಾಂಗ್ರೆಸ್ನವರು. ಹಾಗಾದರೆ ಅಲ್ಲಿರುವ ಕಾಂಗ್ರೆಸ್ ನಿಲುವು ಏನು ಅಂತಾ ಹೇಳಿ. ಬಿಜೆಪಿ ನಾಲ್ಕೇ ಸೀಟು ಇರುವ ಪಾರ್ಟಿ. ಅಲ್ಲಿ ನಮ್ಮ ಮಾತು ನಡೆಯಲ್ಲ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಒಂದು ದಿನವಾದರೂ ಹೋಗಿ ಸ್ಟ್ಯಾಲಿನ್ ಮನವೊಲಿಸು ಪ್ರಯತ್ನ ಮಾಡಿದ್ರಾ?. ನದಿ ವಿವಾದ ಹಿಂದಿನಿಂದಲೂ ಇದೆ. ಆದರೆ ಇವರದ್ದು ಪ್ರಾಮಾಣಿಕ ಪಾದಯಾತ್ರೆ ಅಲ್ಲ ಎಂದು ತಿರುಗೇಟು ನೀಡಿದರು.
ಮೇಕೆದಾಟು ವಿಚಾರವಾಗಿ ಕರ್ನಾಟಕ ಬದ್ಧವಾಗಿದೆ: ತಮಿಳುನಾಡಿನ ನಿರ್ಣಯವನ್ನು ಅಲ್ಲಿನ ಬಿಜೆಪಿ ವಿರೋಧಿಸಬಹುದಿತ್ತು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿರುವ ಬಿಜೆಪಿ ಅಲ್ಲಿನ ಸ್ಟ್ಯಾಂಡ್ ತೆಗೆದುಕೊಳ್ಳುತ್ತದೆ. ಈಗ ಬೆಳಗಾವಿ ವಿಚಾರ ಬಂದಾಗ ರಾಜ್ಯ ಬಿಜೆಪಿ ಮಹಾರಾಷ್ಟ್ರದ ಪರ ನಿಲ್ಲುತ್ತಾ?. ಹಾಗೆಯೇ ಇಲ್ಲಿರುವ ಪ್ರಶ್ನೆ ಬಂದಾಗ ಇಲ್ಲಿ, ಅಲ್ಲಿರುವ ಪ್ರಶ್ನೆ ಬಂದಾಗ ಇಲ್ಲ. ಮೇಕೆದಾಟು ವಿಚಾರವಾಗಿ ಕರ್ನಾಟಕ ಬದ್ಧವಾಗಿದೆ. ಕುಡಿಯುವ ನೀರಿನ ವಿಚಾರವಾಗಿ ರಾಜಕಾರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.