ಬೆಂಗಳೂರು: ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಹುಟ್ಟು ಹಾಕಿ, ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಟೂಲ್ ಕಿಟ್ ಮೂಲಕ ಭಾರತ ಸರ್ಕಾರ, ಮೋದಿಯನ್ನು ಅವಹೇಳನ ಮಾಡಲು ಷಡ್ಯಂತ್ರ ನಡೆಸುತ್ತಿದೆ. ನಕಲಿ ಟೂಲ್‌ಕಿಟ್ ಅಂಥ ಕಾಂಗ್ರೆಸ್ ಹೇಳ್ತಾ ಇದೆ. ನಕಲಿ ಆಗಿದ್ದರೆ, ಟೂಲ್ ಕಿಟ್ನಲ್ಲಿ ಇರುವ ರೀತಿಯಲ್ಲೇ ದೇಶದ ಉದ್ದಗಲಕ್ಕೆ ಕಾಂಗ್ರೆಸ್ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ರೀತಿ ಕಾಕತಾಳಿಯವೇ?. ಟೂಲ್ ಕಿಟ್ ಮೂಲಕ ಅವಹೇಳನ ಅರಾಜಕತೆ ಹುಟ್ಟು ಹಾಕುವ ಸಂಚೇ?. ಟೂಲ್ ಕಿಟ್ ನಕಲಿ ಆಗಲು ಸಾಧ್ಯವಿಲ್ಲ. ಇದು ಪೂರ್ವ ಯೋಜಿತ, ಕೃತ್ಯವಾಗಿದೆ. ಟೂಲ್ ಕಿಟ್ನಲ್ಲಿ ಕುಂಭ ಮೇಳವನ್ನು ಸೂಪರ್ ಸ್ಪ್ರೆಡರ್ ಅಂತ ಬಿಂಬಿಸಿದ್ದಾರೆ. ಅದನ್ನು ಎಲ್ಲಾ ಕಡೆ ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದಾರೆ. ಕೋವಿಡ್ ಪ್ರಕರಣದಲ್ಲಿ ನಂ. 1 ಮಹಾರಾಷ್ಟ್ರ, ಪರ್ಸೆಂಟೇಜ್ನಲ್ಲಿ ಕೇರಳ ನಂ. 2 ಇದೆ ಎಂದು ವಾಗ್ದಾಳಿ ನಡೆಸಿದರು.
ಸಾವನ್ನು ವೈಭವೀಕರಿಸಬೇಕು ಎಂಬುದು ಟೂಲ್ ಕಿಟ್ನಲ್ಲಿದೆ. ಕಾಂಗ್ರೆಸ್ ಬೆಂಬಲಿಗರು ಅದನ್ನು ಮಾಡಿದ್ದಾರೆ. ಹಾಗಾದರೆ ಅದು ಕಾಕತಾಳಿಯವೇ?. ಬೆಡ್ ಬ್ಲಾಕಿಂಗ್ ಮಾಡಿ, ಅವರ ಬೆಂಲಿಗರಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಟೂಲ್ ಕಿಟ್ನಲ್ಲಿದೆ. ಅನೇಕ ರಾಜ್ಯದಲ್ಲಿ ಇದಕ್ಕೆ ಪೂರಕವಾದ ಘಟನೆಗಳು ನಡೆದಿವೆ. ಇದು ಕಾಕತಾಳಿಯವೇ?. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಅನೇಕ ಕಾಂಗ್ರೆಸ್ ನಾಯಕರು ಮೋದಿ ಸ್ಟ್ರೈನ್, ಇಂಡಿಯನ್ ಸ್ಟ್ರೈನ್ ಅಂತ ಪದ ಬಳಸುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ನಿನ್ನೆ ವಿಡಿಯೋ ಕಾಲ್ ಮಾಡಿ ಗುಣಮುಖನಾಗುವೆ ಎಂದಾತ ಇಂದು ಕೋವಿಡ್ಗೆ ಬಲಿ!
ಚೀನಾವನ್ನು ಬೊಟ್ಟು ಮಾಡುವ ಧೈರ್ಯವಿಲ್ಲ. ಆದರೆ ಮೋದಿಗೆ, ಭಾರತಕ್ಕೆ ಕಳಂಕತರುವ ಪದ ಬಳಸುತ್ತಿದ್ದಾರೆ. ನಕಲಿ ಖಾತೆ ಮತ್ತು ಚಾಟ್ ಬಳಸಿ ದೇಶಕ್ಕೆ ಕಳಂಕ ತರಲು ಅಪಪ್ರಚಾರ ಮಾಡಿದ್ದಾರೆ. ಟೂಲ್ಕಿಟ್ನಲ್ಲಿದ್ದಂತೆ ಎಲ್ಲವನ್ನೂ ಕಾಂಗ್ರೆಸ್ ಮಾಡಿದ್ದಾರೆ. ಹಾಗಾಗಿ ಇದು ಕಾಕತಾಳಿಯವಲ್ಲ. ವೆಂಟಿಲೇಟರ್ ಸರಿಯಿಲ್ಲ ಎಂದು ಅಪಪ್ರಚಾರ ಮಾಡಿದರು. ವೆಂಟಿಲೇಟರ್ನ ಬಾಕ್ಸ್ ಓಪನ್ ಮಾಡದೇ ಅದು ಸರಿಯಿಲ್ಲ ಎಂದು ಕಾಂಗ್ರೆಸ್ನವರು ಆರೋಪಿಸಿದ್ದಾರೆ. ಮೋದಿಯನ್ನು ಅಪಮಾನ ಮಾಡುವುದಕ್ಕೆ, ಅಪಪ್ರಚಾರ ಮಾಡಲು ಕಾಂಗ್ರೆಸ್ ಟೂಲ್ ಕಿಟ್ ಬಳಸುತ್ತಿದೆ ಎಂದು ಆರೋಪಿಸಿದರು.
ನಿಮ್ಮ ರಾಜಕೀಯ ಬೆಳವಣಿಗಾಗಿ ಜನ ಹಿತ ಬಿಟ್ಟು ಅವಕಾಶವಾದಿ ರಾಜಕಾರಣ ಮಾಡಿದರೆ, ಅದು ರಾಜಕೀಯ ಬೆಳವಣಿಗೆ ಆಗಲ್ಲ. ರಾಜಕೀಯ ಅಂತ್ಯ ಆಗುತ್ತದೆ. ಚೀನಾ ಪ್ರಶ್ನಿಸುವ ಧೈರ್ಯ ಇಲ್ಲ. ಇದು ಚೀನಾದ ಜೊತೆಗಿನ ಹೊಂದಾಣಿಕೆಯ ಒಳಗುಟ್ಟಾ?. 54 ವರ್ಷ ದೇಶವನ್ನು ಕಾಂಗ್ರೆಸ್ ಆಳ್ವಿಕೆ ಮಾಡಿತ್ತು. ಅಷ್ಟು ವರ್ಷ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸಿಲ್ಲ. ಈಗ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ ಎಂದು ಸಿ ಟಿ ರವಿ ಕಿಡಿಕಾರಿದರು.
ಅರಾಜಕತೆ ಸೃಷ್ಟಿಸಲು ಯಾರನ್ನು ಬಳಸಬೇಕು ಎಂಬುದು ಟೂಲ್ಕಿಟ್ನಲ್ಲಿ ಇತ್ತು. ಅದರಂತೆ ಕೆಲ ಪತ್ರಕರ್ತರು, ಬುದ್ಧಿಜೀವಿಗಳನ್ನು ಬಳಕೆ ಮಾಡಲಾಗಿದೆ. ಕಾಂಗ್ರೆಸ್ ತನ್ನ ಅಧಿಕಾರದ ಹಪಾಹಪಿತನಕ್ಕಾಗಿ ದೇಶದಲ್ಲಿ ಅರಾಜಕತೆ ಮಾಡಲು ಹೊರಟಿದೆ. ಮೋದಿ ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟರೂ, ಈಗ ಆಗಿರುವ ಅನಾಹುತ ಎಲ್ಲವನ್ನೂ ಪ್ರಧಾನಿ ತಲೆಗೆ ಕಟ್ಟಲು ಯತ್ನಿಸಲಾಗುತ್ತಿದೆ. ಈ ವ್ಯಾಕ್ಸಿನ್ ತಗೊಂಡರೆ ಜನ ಸಾಯ್ತಾರೆ, ಇದು ಮೋದಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ನವರು ಅಪಪ್ರಚಾರ ಮಾಡಿದ್ದರು. ವಿದೇಶದಿಂದ ಬಂದಿದ್ದೆಲ್ಲಾ ಒಳ್ಳೆಯದು ಎಂಬ ಗುಲಾಮಿ ಮನಸ್ಥಿತಿ ಕಾಂಗ್ರೆಸ್ನದ್ದು. ಈಗ ಕಾಂಗ್ರೆಸ್ನವರೆಲ್ಲರೂ ಗುಟ್ಟಾಗಿ ಹೋಗಿ ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಇದು ಕಾಂಗ್ರೆಸ್ ನ ಇಬ್ಬಂಗಿತನವಾಗಿದೆ ಎಂದು ಸಿ ಟಿ ರವಿ ತಿರುಗೇಟು ನೀಡಿದರು.