ಬೆಂಗಳೂರು: ಯೋಗಿ ಆದಿತ್ಯನಾಥ್ ಅಂತವರು ಬೆಳಕಿಗೆ ಬಂದಿದ್ದು ಬಿಜೆಪಿಯ ಪ್ರಯೋಗಶೀಲತೆಯಿಂದಲೇ, ಉತ್ತರಾಖಂಡದಲ್ಲಿ ಸೋತವರನ್ನೂ ಮುಖ್ಯಮಂತ್ರಿ ಮಾಡಲಾಗಿದೆ. ಪಕ್ಷ ತೀರ್ಮಾನ ಮಾಡಿದರೆ ಯಾರನ್ನ, ಯಾವ ಸ್ಥಾನಕ್ಕೆ ಬೇಕಾದರೂ ಕೂರಿಸಲಿದೆ ಎಂದು ಕುಟುಂಬ ರಾಜಕಾರಣ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಹೇಳಿಕೆ ರಾಷ್ಟ್ರಕ್ಕೆ ಸೇರಲಿದೆ. ನಮ್ಮ ಪಕ್ಷ ಏನು ಮಾಡಲಿದೆ ಮತ್ತು ಪಕ್ಷದ ಪ್ರಯೋಗ ಶೀಲತೆ ಬಗ್ಗೆ ಅವರು ಹೇಳಿದ್ದಾರೆ. ಭಾರತದಲ್ಲೇ ಕರ್ನಾಟಕ ಇದೆ, ಎಲ್ಲವೂ ಅದರಲ್ಲಿ ಸೇರಲಿದೆ. ಸಂತೋಷ್ ಅವರ ಹೇಳಿಕೆಗೆ ಯಾವುದೇ ಅರ್ಥ ಕಲ್ಪಿಸುವುದು ಬೇಡ. ವ್ಯಕ್ತಿಗತವಾಗಿ ತೆಗೆದುಕೊಳ್ಳುವುದು ಬೇಡ. ಯೋಗಿ ಆದಿತ್ಯನಾಥ್ ಅಂತವರು ಬೆಳಕಿಗೆ ಬಂದಿದ್ದು, ಇಂತ ಪ್ರಯೋಗಶೀಲತೆಯಿಂದಲೇ. ಪಕ್ಷದ ಸಿದ್ಧಾಂತ ಕಾರ್ಯಕರ್ತನಾಗಿ ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು, ಕುಟುಂಬದಿಂದ ಅಲ್ಲ ಎಂದರು.