ಬೆಂಗಳೂರು :ಹೂಡಿಕೆ ಸೋಗಿನಲ್ಲಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಾವತಿಸಿಕೊಂಡು ಡಬಲ್ ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಬೃಹತ್ ಜಾಲವನ್ನ ಸಿಸಿಬಿ ಬಯಲಿಗೆಳೆದಿದೆ. ಲಾಕ್‌ಡೌನ್ ವೇಳೆ ಆರೋಪಿಗಳು ಗೂಗಲ್ ಫ್ಲೇ ಸ್ಟೋರ್ ಮುಖಾಂತರ ಶೇರ್ ಹ್ಯಾಶ್ ಅಫ್ಲೀಕೇಷನ್ ಇನ್ ಸ್ಟಾಲ್ ಮಾಡುವಂತೆ ಮೆಸೇಜ್ ಮಾಡುತ್ತಿದ್ದರು.
ಈ ಮೂಲಕ ಹಿಲೀಯಂ ಕ್ರಿಪ್ಟೋ ಟೋಕನ್ಗೆ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದಿಸಬಹುದು ಎಂದು ನಂಬಿಸಿ ವಂಚಿಸಿದ್ದಾರೆ. ಆರಂಭದಲ್ಲಿ ಗ್ರಾಹಕರಿಗೆ ನಂಬಿಕೆ ಬರಲು 5 ಸಾವಿರ ಇನ್ವೆಸ್ಟ್ ಮಾಡಿದ್ರೆ ಪ್ರತಿ ದಿನ 49 ರೂಪಾಯಿ ಬಡ್ಡಿ ಕೊಡುತ್ತಿದ್ದರು. ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡೋಕೆ ಶುರು ಮಾಡಿದ್ದರು. ಇದಕ್ಕಾಗಿ 900 ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪ್ರತಿ ಗ್ರೂಪ್‌ನಲ್ಲಿ 256 ಜನ ಸದಸ್ಯರಾಗಿದ್ದರು.
ಹೂಡುವವರ ಸಂಖ್ಯೆ ಹೆಚ್ಚಾದಂತೆ ಶೇರ್ ಹ್ಯಾಶ್ ಡಾಟ್ ಕಾಮ್ ಕಂಪನಿಗೆ ಐದು ಕಂಪನಿಗಳಾದ ಕೋಟ್ಯಾಟ್ ಟೆಕ್ನಾಲಜಿ ಕಂಪನಿ, ಸಿರಾಲಿನ್ ಟೆಕ್ ಸಲ್ಯೂಷನ್ ಪ್ರೈವೈಟ್ ಲಿಮಿಟೆಡ್, ನೈಲಿನ್ ಇನ್‌ಫೋಟೆಕ್ ಪ್ರೈವೈಟ್ ಲಿಮಿಟೆಡ್, ಮಾಲ್ಟ್ರೆಸ್ ಎಕ್ಸಿಮ್ ಪ್ರೈವೈಟ್ ಲಿಮಿಟೆಡ್ ಹಾಗೂ ಕ್ರಾಪಿಂಗಟನ್ ಟೆಕ್ನಾಲಜಿ ಪ್ರೈವೈಟ್ ಕಂಪನಿಗಳಿಗೆ ಲಿಂಕ್ ಮಾಡಿ ಅದರ ಬ್ಯಾಂಕ್ ಖಾತೆಗಳಿಗೆ ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡುತ್ತಿದ್ದರು.