ಕರ್ನಾಟಕ

karnataka

ETV Bharat / city

ಪುನೀತ್ ಅಂತ್ಯಸಂಸ್ಕಾರದ ಬಳಿಕ ಕಂಠೀರವ ಸ್ಟುಡಿಯೋ ಬಳಿ ಕರಗಿದ ಜನದಟ್ಟಣೆ - ಪುನೀತ್ ರಾಜಕುಮಾರ್

ಬೆಂಗಳೂರಿನ ಹೊರವರ್ತುಲ ರಸ್ತೆಯ ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ಮುಗಿದ ಅರ್ಧ ಗಂಟೆ ಬಳಿಕ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು, ನಿಧಾನವಾಗಿ ಜನದಟ್ಟಣೆ ಕಡಿಮೆ ಆಗಿದೆ.

ಪುನೀತ್ ಅಂತ್ಯಸಂಸ್ಕಾರದ ಬಳಿಕ ಕಂಠೀರವ ಸ್ಟುಡಿಯೋ ಬಳಿ ಕರಗಿದ ಜನದಟ್ಟಣೆ
ಪುನೀತ್ ಅಂತ್ಯಸಂಸ್ಕಾರದ ಬಳಿಕ ಕಂಠೀರವ ಸ್ಟುಡಿಯೋ ಬಳಿ ಕರಗಿದ ಜನದಟ್ಟಣೆ

By

Published : Oct 31, 2021, 12:39 PM IST

ಬೆಂಗಳೂರು:ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರ ಪೂರ್ಣಗೊಂಡ ಅರ್ಧ ಗಂಟೆ ಬಳಿಕ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು ನಿಧಾನವಾಗಿ ಜನದಟ್ಟಣೆ ಕಡಿಮೆ ಆಗಿದೆ.

ಬೆಂಗಳೂರಿನ ಹೊರವರ್ತುಲ ರಸ್ತೆಯ ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ಮುಗಿದಿದೆ. ಎರಡು ದಿನದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದ ಪುನೀತ್ ಅಂತ್ಯಸಂಸ್ಕಾರ ಅವರ ತಾಯಿ ಪಾರ್ವತಮ್ಮ ರಾಜಕುಮಾರ್ ಸಮಾಧಿ ಪಕ್ಕವೇ ನೆರವೇರಿದೆ.

ಪುನೀತ್ ಅಂತ್ಯಸಂಸ್ಕಾರದ ಬಳಿಕ ಕಂಠೀರವ ಸ್ಟುಡಿಯೋ ಬಳಿ ಕರಗಿದ ಜನದಟ್ಟಣೆ

ಪೊಲೀಸ್ ಬಿಗಿ ಬಂದೋಬಸ್ತ್​​ನಲ್ಲಿ ಈ ಕಾರ್ಯ ನೆರವೇರಿತು. ಸಾರ್ವಜನಿಕರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಆದರೂ 3000ಕ್ಕೂ ಹೆಚ್ಚು ಪುನೀತ್ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಎದುರು ಭಾಗದ ರಸ್ತೆಗಳಲ್ಲಿ ಜಮಾಯಿಸಿದ್ದರು. ಅಂತ್ಯಕ್ರಿಯೆಯನ್ನು ಬೃಹತ್ ಎಲ್ಇಡಿ ಫಲಕದ ಮೂಲಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಂತ್ಯಸಂಸ್ಕಾರ ಪೂರ್ಣಗೊಳ್ಳುತ್ತಿದ್ದಂತೆ ಫಲಕವನ್ನು ತೆರವುಗೊಳಿಸಲಾಯಿತು.

ಇದನ್ನೂ ಓದಿ: ನನ್ನ ಮಗುವನ್ನ ಕಳೆದುಕೊಂಡಿದ್ದೀನಿ.. ಅಂತ್ಯಕ್ರಿಯೆ ಬಳಿಕ ಶಿವಣ್ಣನ ಭಾವುಕ ನುಡಿ

ಅಂತ್ಯಸಂಸ್ಕಾರ ಮುಗಿದ ಕೆಲ ಸಮಯದ ಬಳಿಕವೂ ಒಂದಿಷ್ಟು ಜನ ತೆರಳದೆ ಇರುವುದನ್ನು ಕಂಡು, ಬಲವಂತವಾಗಿ ಪೊಲೀಸರು ಆಚೆ ಕಳಿಸಿದರು. ಪೊಲೀಸ್ ವಾಹನಗಳಲ್ಲಿ ಸೈರನ್​​ ಮೊಳಗಿಸಿ ಜನರನ್ನು ದೂರ ಕಳಿಸುವ ಪ್ರಯತ್ನ ಮಾಡಿದರು. ಇದಾದ ಬಳಿಕ ಕಂಠೀರವ ಸ್ಟುಡಿಯೋ ಪ್ರವೇಶದ್ವಾರದ ಸುತ್ತ ಬ್ಯಾರಿಕೇಡ್​​ಗಳನ್ನು ಅಳವಡಿಸಿ ಯಾರಿಗೂ ಒಳಗೆ ಪ್ರವೇಶ ಮಾಡದಂತೆ ಪೊಲೀಸರು ಕ್ರಮ ಕೈಗೊಂಡರು. ಸ್ಟುಡಿಯೋ ಆವರಣ ಇರುವ ಸರ್ವಿಸ್ ರಸ್ತೆಗೆ ಅಡ್ಡಲಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಯಾವುದೇ ರೀತಿಯಲ್ಲೂ ಸಾರ್ವಜನಿಕರು ಪುನೀತ್ ಸಮಾಧಿ ಸ್ಥಳಕ್ಕೆ ತೆರಳದೇ ಇರುವಂತೆ ಭದ್ರತೆ ಒದಗಿಸಲಾಗಿದೆ.

ಹೊರವರ್ತುಲ ರಸ್ತೆಯ ಸಂಚಾರವನ್ನು ನಾಯಂಡಹಳ್ಳಿ ಜಂಕ್ಷನ್​​ನಿಂದ ಗೊರಗುಂಟೆಪಾಳ್ಯ ಜಂಕ್ಷನ್ ವರೆಗೂ ಬೆಳಗ್ಗೆಯಿಂದ ನಿರ್ಬಂಧಿಸಲಾಗಿತ್ತು. ಎರಡು ಮುಖವಾಗಿ ಸಂಚರಿಸುವ ವಾಹನಗಳನ್ನು ತಡೆಯಲಾಗಿತ್ತು. ಇದೀಗ ವಾಹನ ಸಂಚಾರ ಪುನರಾರಂಭಗೊಂಡಿದ್ದು ಕಂಠೀರವ ಸ್ಟುಡಿಯೋ ಎದುರು ಭಾಗದ ಸರ್ವಿಸ್ ರಸ್ತೆಯನ್ನು ಮಾತ್ರ ವಾಹನ ಹಾಗೂ ಜನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಈಗಲೂ ಕಂಠೀರವ ಸ್ಟುಡಿಯೋ ಬಳಿ ಬರುತ್ತಲೇ ಇದ್ದು, ಇವರನ್ನು ತಡೆಯುವುದು ಹಾಗೂ ಪ್ರವೇಶ ನಿರಾಕರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ABOUT THE AUTHOR

...view details