ಬೆಂಗಳೂರು :ಜನಸಾಮಾನ್ಯರು ವಿದ್ಯುತ್ ಶುಲ್ಕ ಕಟ್ಟಿಲ್ಲವೆಂದಾದರೆ ಕ್ಷಣಾರ್ಧದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಕಾರ್ಯವನ್ನು ಇಂಧನ ಇಲಾಖೆ ಮಾಡುತ್ತದೆ. ಅದೇ ಸರ್ಕಾರಿ ಇಲಾಖೆಗಳು ಕೋಟಿ ಕೋಟಿ ವಿದ್ಯುತ್ ಶುಲ್ಕವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರೂ ಇಂಧನ ಇಲಾಖೆ ಯಾವುದೇ ಕ್ರಮಕೈಗೊಂಡಂತಿಲ್ಲ. ಎಸ್ಕಾಂಗಳು ವಿದ್ಯುತ್ ಶುಲ್ಕ ಪಾವತಿಸದಿರುವ ವಿವಿಧ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದ್ದರೂ ಇಲಾಖೆಗಳು ಮಾತ್ರ ಇದಕ್ಕೆ ಕ್ಯಾರೇ ಅಂದಿಲ್ಲ.
ಇಂಧನ ಇಲಾಖೆಗೆ ಬಾಕಿ ಉಳಿದುಕೊಂಡಿರುವ ವಿದ್ಯುತ್ ಶುಲ್ಕವನ್ನು ವಸೂಲಾತಿ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ವಿವಿಧ ಸರ್ಕಾರಿ ಇಲಾಖೆಗಳೇ ಇಂಧನ ಇಲಾಖೆಗೆ ಸಾವಿರಾರು ಕೋಟಿ ವಿದ್ಯುತ್ ಬಿಲ್ ಪಾವತಿಸದೇ ಇರುವುದು ಇನ್ನಷ್ಟು ತಲೆನೋವಾಗಿ ಕಾಡಿದೆ. ಜನಸಾಮಾನ್ಯ ವಿದ್ಯುತ್ ಶುಲ್ಕವನ್ನು ಕಟ್ಟದೇ ಇದ್ದರೆ, ವಿದ್ಯುತ್ ಸಂಪರ್ಕ ಕಡಿತ ಮಾಡಲು ಮುಂದಾಗುವ ಎಸ್ಕಾಂಗಳು, ಅದೇ ವಿವಿಧ ಸರ್ಕಾರಿ ಇಲಾಖೆಗಳ ಬಾಕಿ ಶುಲ್ಕ ಪಾವತಿಸದೇ ಇರುವ ಬಗ್ಗೆ ತುಟಿ ಬಿಚ್ಚಿಲ್ಲ.
ಸರ್ಕಾರಿ ಇಲಾಖೆಗಳೇ ಇಂಧನ ಇಲಾಖೆಗೆ ಸಾವಿರಾರು ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಮೈತುಂಬಾ ಸಾಲ ಮಾಡಿ ಪ್ರತಿವರ್ಷ ವಿದ್ಯುತ್ ಖರೀದಿ ಮಾಡುವ ಎಸ್ಕಾಂಗಳಿಗೆ ಈ ಕೋಟಿ ಕೋಟಿ ಬಾಕಿ ವಿದ್ಯುತ್ ಶುಲ್ಕ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಇದರಿಂದ ಇಂಧನ ಇಲಾಖೆಯ ಕಾರ್ಯಕ್ಷಮತೆಯೂ ಕುಂಠಿತವಾಗಿದೆ. ಅಷ್ಟಕ್ಕೂ ವಿವಿಧ ಇಲಾಖೆಗಳ ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಇರುವ ಮೊತ್ತ ನೋಡಿದರೆ ಎಲ್ಲರೂ ನಿಬ್ಬೆರಗಾಗುವುದು ಖಚಿತ.
ಇಲಾಖೆಗಳಿಂದ 6,670 ಕೋಟಿ ವಿದ್ಯುತ್ ಬಿಲ್ ಬಾಕಿ !: ಎಸ್ಕಾಂಗಳಿಗೆ ಸರ್ಕಾರಿ ಇಲಾಖೆಗಳ ಬಾಕಿ ವಿದ್ಯುತ್ ಶುಲ್ಕದ ವಸೂಲಾತಿಯದ್ದೇ ದೊಡ್ಡ ತಲೆನೋವು. ಪ್ರತಿವರ್ಷ ಬಾಕಿ ವಿದ್ಯುತ್ ಶುಲ್ಕ ಬೆಟ್ಟದಷ್ಟು ಬೆಳೆಯುತ್ತಿದೆ. ಆದರೆ, ಸರ್ಕಾರಿ ಇಲಾಖೆಗಳು ಮಾತ್ರ ಅದರ ಪಾವತಿಗೆ ಹೆಚ್ಚಿನ ತಲೆಕೆಡಿಸಿಕೊಳ್ಳುತ್ತಿದ್ದಂತೆ ಕಾಣುತ್ತಿಲ್ಲ. ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ ಬರೋಬ್ಬರಿ 6,670 ಕೋಟಿ ರೂ. ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಇದೆ.
ಈಟಿವಿ ಭಾರತಕ್ಕೆ ಲಭ್ಯವಾದ ಅಂಕಿ-ಅಂಶದ ಪ್ರಕಾರ ಏಪ್ರಿಲ್ 1, 2021ಕ್ಕೆ ವಿವಿಧ ಸರ್ಕಾರಿ ಇಲಾಖೆಗಳು 5,530 ಕೋಟಿ ರೂ. ಬಾಕಿ ವಿದ್ಯುತ್ ಶುಲ್ಕ ಪಾವತಿಸಬೇಕಿತ್ತು. 2021-22ರ ಸಾಲಿನಲ್ಲಿ ವಿವಿಧ ಇಲಾಖೆಗಳು 4,569 ಕೋಟಿ ರೂ. ವಿದ್ಯುತ್ ಶುಲ್ಕವನ್ನು ಪಾವತಿಸಬೇಕಿತ್ತು. ಈ ಮೂಲಕ ವಿದ್ಯುತ್ ಶುಲ್ಕವನ್ನು ಪಾವತಿ ಮಾಡದೇ 2021-22ರ ಸಾಲಿಗೆ ಬರೋಬ್ಬರಿ 10,099 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದುಕೊಂಡಿತ್ತು.