ಬೆಂಗಳೂರು :40ಕ್ಕೂ ಹೆಚ್ಚು ದಿನಗಳಿಂದ ಮದ್ಯ ಸಿಗದ ಕಾರಣ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣ ಸಂಖ್ಯೆ ಗಣನೀಯ ಇಳಿಕೆಯಾಗಿತ್ತು.. ಆದ್ರೀಗ,
ಮದ್ಯ ಮಾರಾಟ ಮಾಡಕ್ಕೆ ಅವಕಾಶ ನೀಡಿದ ಮೊದಲ ದಿನವೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲ ಮುಖ್ಯ ಅಪರಾಧ ಕೃತ್ಯಗಳು ಇಲ್ಲಿವೆ.
1.ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ :ಮದ್ಯದ ಅಂಗಡಿಗಳಿಗೆ ಅನುಮತಿ ನೀಡಿದ ದಿನವೇ ಹಲವಾರು ಮಂದಿ ಎಣ್ಣೆ ಖರೀದಿಗೆ ಮುಂದಾಗಿದ್ರು. ಇದೇ ವೇಳೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹರೀಶ್ ಎಂಬಾತ, ಮನೆಯವರ ಬಳಿ ಮದ್ಯ ಖರೀದಿ ಮಾಡಲು ಮನೆಯಲ್ಲಿ ಹಣ ಕೇಳಿದ್ದಾನೆ. ಹಣ ಕೊಡಲಿಲ್ಲ ಎಂಬ ಕಾರಣದಿಂದ ಮೈಗೆ ಬೆಂಕಿ ಹಂಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದೇಹ ಶೇ.80ರಷ್ಟು ಸುಟ್ಟಿದ್ದು ಬದುಕೋದು ಸಂದೇಹ ಅಂತಿದ್ದಾರೆ ವೈದ್ಯರು ಹಾಗೂ ಪೊಲೀಸರು.
2.ಬಾಗಲಗುಂಟೆ ಪೊಲೀಸ್ ಠಾಣೆ : ಹಾಗೇಬಾಗಲಗುಂಟೆ ಬಳಿ ರೌಡಿಶೀಟರ್ಗಳು ಕುಡಿದ ನಶೆಯಲ್ಲಿ ವಾಗ್ವಾದ ಆರಂಭವಾಗಿದ್ದರಿಂದ ರೌಡಿ ಕರಣ್ ಸಿಂಗ್ ಎಂಬಾತನಿಗೆ ಪ್ರಭು ಎಂಬಾತ ಚಾಕುವಿನಿಂದ ಚುಚ್ವಿದ್ದ. ಕರಣ್ಸಿಂಗ್ ಮೃತಪಟ್ಟಿದ್ದಾನೆ.
3.ಕಾಮಾಕ್ಷಿಪಾಳ್ಯಪೊಲೀಸ್ ಠಾಣೆ :ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಠಪೂರ್ತಿ ಮದ್ಯ ಕುಡಿದು ದೇವದಾಸ್ ಎಂಬಾತ ಆಯತಪ್ಪಿ ಚರಂಡಿಗೆ ಬಿದ್ದಿದ್ದ. ಇದರಿಂದಾಗಿ ಆತನ ತಲೆಗೆ ಗಂಭೀರವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ.
4.ಜೀವನ್ ಭೀಮಾನಗರ ಪೊಲೀಸ್ ಠಾಣೆ:ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತರಾದ ಶ್ರೀನಿವಾಸ್ ಹಾಗೂ ಸಂತೋಷ್ ಎಂಬಿಬ್ಬರು ಸಾಲಿನಲ್ಲಿ ನಿಂತು, ಮದ್ಯ ಖರೀದಿ ಮಾಡಿ, ದೊಮ್ಮಲೂರು ಸಮೀಪದ ಸ್ಮಶಾನದಲ್ಲಿ ಎಣ್ಣೆ ಕುಡಿಯುತ್ತಿದ್ದರು. ಈ ವೇಳೆ ಗಲಾಟೆಯಾಗಿ ಸಂತೋಷ್ ಶ್ರೀನಿವಾಸ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
5.ಹೈಗ್ರೌಂಡ್ಸ್ ಪೊಲೀಸ್ ಠಾಣೆ :ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಕುಡಿದು ವ್ಯಕ್ತಿಯೋರ್ವ ಅಮಲಿನಲ್ಲಿ ಬಿದ್ದಿದ್ದ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತ ದೇಹವನ್ನು ಸದ್ಯಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.
ಶ್ರೀರಾಂಪುರ, ಸುಬ್ರಮಣ್ಯಪುರ, ಕೆಂಗೇರಿ, ವಿದ್ಯಾರಣ್ಯಪುರ ಹೀಗೆ ಹಲವೆಡೆ ಮದ್ಯದ ಅಮಲಿನಲ್ಲಿ ಗಲಾಟೆ ನಡೆದು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಮಾಡಿದ ನಂತರ ಅಪರಾಧ ಪ್ರಕರಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದವು. ಆದ್ರೀಗ ಮತ್ತೆ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಕಾರಣ ಮದ್ಯ ಅಂತಾ ಹೇಳ್ತಿದ್ದಾರೆ ಪೊಲೀಸರು.