ಬೆಂಗಳೂರು: ಕೆಲ ರಾಜ್ಯಗಳು ಪಟಾಕಿ ನಿಷೇಧ ಮಾಡಿದ ಬೆನ್ನಲ್ಲೇ ರಾಜ್ಯದ ಪಟಾಕಿ ವರ್ತಕರಿಗೆ ರಾಜ್ಯ ಸರ್ಕಾರ್ ಬಿಗ್ ಶಾಕ್ ನೀಡಿದೆ. ಈ ಬಾರಿಯ ದೀಪಾವಳಿಗೆ ಪಟಾಕಿ ನಿಷೇಧಗೊಳಿಸಿದ್ದು, ಕೇವಲ ದೀಪ ಬೆಳಗಲು ಸೀಮಿತ ಎಂದು ತಿಳಿಸಿದೆ.
ದೆಹಲಿ, ರಾಜಸ್ಥಾನ, ಒಡಿಶಾ ಸೇರಿದಂತೆ ಕೆಲ ರಾಜ್ಯಗಳು ಈ ಬಾರಿ ದೀಪಾವಳಿಗೆ ಪಟಾಕಿ ನಿಷೇಧ ಮಾಡಿವೆ. ಅವುಗಳ ಸಾಲಿಗೆ ಇಂದು ಕರ್ನಾಟಕ ಸೇರ್ಪಡೆಯಾಗಿದೆ. ಇತ್ತೀಚೆಗೆ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿದ್ದ ಸರ್ಕಾರ, ಪಟಾಕಿ ಸಿಡಿಸುವುದರಿಂದ ಕೊರೊನಾ ಸೋಂಕು ಹೆಚ್ಚಳವಾಗಲಿದೆ. ಹಾಗಾಗಿ ಈ ಬಾರಿ ಪಟಾಕಿ ಸಿಡಿಸುವುದಕ್ಕೆ ನಿಷೇಧ ಹೇರಿದರೆ ಒಳಿತು ಎನ್ನುವ ಅಭಿಪ್ರಾಯವನ್ನು ಸರ್ಕಾರಕ್ಕೆ ನೀಡಿತ್ತು.
ಇದನ್ನು ಪರಿಗಣಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಅಧಿಕೃತವಾಗಿ ರಾಜ್ಯದಲ್ಲಿ ಈ ಬಾರಿ ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ನಿಷೇಧ ಮಾಡುವ ನಿರ್ಧಾರ ಪ್ರಕಟಿಸಿದರು. ಯಾವುದೇ ರೀತಿಯ ಪಟಾಕಿ ಸಿಡಿಸುವುದಕ್ಕೆ ಅವಕಾಶ ಇಲ್ಲ. ಸದ್ಯದಲ್ಲೇ ಸರ್ಕಾರಿ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಪಟಾಕಿ ವರ್ತಕರರಿಗೆ ಬಿಗ್ ಶಾಕ್
ಪಟಾಕಿ ನಿಷೇಧ ಮಾಡುವ ನಿರ್ಧಾರ ಹೊರ ಬೀಳುತ್ತಿದ್ದಂತೆ ವರ್ತಕರಲ್ಲಿ ಆತಂಕ ಶುರುವಾಗಿದೆ. ಕೊರೊನಾದಿಂದಾಗಿ ಈಗಷ್ಟೇ ಆರ್ಥಿಕ ಚೇತರಿಕೆಯ ಕನಸಿನಲ್ಲಿ ಹಬ್ಬಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದ ವರ್ತರಕರು ದೀಪಾವಳಿ ಹಬ್ಬದ ಪಟಾಕಿ ಮಾರಾಟಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಈಗಾಗಲೇ ಖರೀದಿ ಮಾಡಿಕೊಂಡಿದ್ದು, ಮತ್ತಷ್ಟು ವರ್ತಕರು ಮುಂಗಡ ಹಣ ನೀಡಿ ಪಟಾಕಿಗೆ ಬೇಡಿಕೆ ಕಳಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಮೈದಾನದಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಸರ್ಕಾರ ಇಂದು ಪಟಾಕಿ ವರ್ತಕರಿಗೆ ಶಾಕ್ ನೀಡಿದೆ.
ಪಟಾಕಿ ವರ್ತಕರಿಗೆ ನಷ್ಟ ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ
ಇನ್ನು ಸರ್ಕಾರದ ನಿರ್ಧಾರವನ್ನು ವಸತಿ ಸಚಿವ ವಿ.ಸೋಮಣ್ಣ ಸಮರ್ಥಿಸಿಕೊಂಡಿದ್ದಾರೆ. ತಜ್ಞರ ವರದಿ ಕ್ರೋಢೀಕರಿಸಿದಾಗ ಜನತೆಯ ಆರೋಗ್ಯದ ದೃಷ್ಟಿಯಿಂದ ಪಟಾಕಿ ನಿಷೇಧದ ಅವಶ್ಯಕತೆ ಇತ್ತು. ಇದನ್ನು ಸಿಎಂ ಕಾರ್ಯರೂಪಕ್ಕೆ ತರುತ್ತಿದ್ದಾರೆ. ನಾವು ಪಟಾಕಿ ಮಾರಾಟ ನಿಷೇಧದ ಅನಾಹುತ ತಡೆದುಕೊಳ್ಳಲೇಬೇಕು. ಇಲ್ಲದೇ ಇದ್ದಲ್ಲಿ ಕೋಟ್ಯಂತರ ಜನರಿಗೆ ಅನಾನುಕೂಲ ಆಗಲಿದೆ. ಹಾಗಾಗಿ ಪಟಾಕಿ ಉತ್ಪಾದಕರು, ಮಾರಾಟಗಾರರಿಗೆ ನಷ್ಟ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎನ್ನುವ ಮೂಲಕ ವರ್ತಕರ ಸಂಕಷ್ಟಕ್ಕೆ ಸರ್ಕಾರದ ಸ್ಪಂದನೆ ನೀಡುವುದಿಲ್ಲ ಎನ್ನುವ ಮಾಹಿತಿ ರವಾನಿಸಿದ್ದಾರೆ.
ಬಹುಪಾಲು ಪಟಾಕಿ ತಯಾರಿಕೆ ತಮಿಳುನಾಡಿನ ಶಿವಕಾಶಿಯಲ್ಲೇ ಆಗುತ್ತಿದ್ದು, ಕೊರೊನಾದಿಂದ ಕಂಗೆಟ್ಟಿರುವ ವರ್ತಕರರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಲಿದೆ. ಪಟಾಕಿ ತಯಾರಿಕೆಯನ್ನು ಬದುಕಾಗಿಸಿಕೊಂಡವರ ಜೀವನ ಕತ್ತಲಾಗಲಿದೆ. ಹಾಗಾಗಿ ಬೆಳಕಿನ ಹಬ್ಬಕ್ಕೆ ಪಟಾಕಿ ನಿಷೇಧ ಬೇಡ. ಪಟಾಕಿ ನಿಷೇಧ ಮಾಡುವ ರಾಜ್ಯಗಳಿಗೆ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲನೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ. ಅದರ ಬೆನ್ನಲ್ಲೇ ತಮಿಳುನಾಡಿನ ನೆರೆ ರಾಜ್ಯವಾಗಿರುವ ಕರ್ನಾಟಕ ಕೂಡ ಇಂದು ಪಟಾಕಿ ನಿಷೇಧ ಮಾಡಿ ಶಾಕ್ ನೀಡಿದೆ.