ಬೆಂಗಳೂರು: ರಾಜ್ಯ ಸರ್ಕಾರಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಬ್ಯಾನ್ ಮಾಡಿರುವುದಕ್ಕೆ ಪಟಾಕಿ ವ್ಯಾಪಾರಿಗಳ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈಗಾಗಲೇ ತಮಿಳುನಾಡಿನ ಶಿವಕಾಶಿಯಿಂದ ಖರೀದಿ ಮಾಡಿರುವ ಪಟಾಕಿಗಳನ್ನು ಏನು ಮಾಡುವುದು, ಕಂಪನಿಗಳೂ ವಾಪಸ್ ಪಡೆಯುವುದಿಲ್ಲ, ಮಾರಾಟವೂ ಆಗದಿದ್ದರೆ ನಮ್ಮ ಸಿಬ್ಬಂದಿ, ಕುಟುಂಬದ ನಿರ್ವಹಣೆ ಹೇಗೆ ಸಾಧ್ಯ?. ಈಗಾಗಲೇ ಕೋವಿಡ್ನಿಂದ ಆರು ತಿಂಗಳು ಸಂಕಷ್ಟ ಅನುಭವಿಸಿರುವ ನಾವು, ಮತ್ತೆ ಈ ನಷ್ಟ ತಡೆದುಕೊಳ್ಳುವುದು ಹೇಗೆ ಎಂದು ಪಟಾಕಿ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಪರಂಜ್ಯೋತಿ ಪ್ರತಿಕ್ರಿಯೆ ನೀಡಿದರು.
ದೀಪಾವಳಿಗೆ ಸರಕು ಮಾರಾಟ ಆಗದಿದ್ದರೆ, ಮುಂದಿನ ದೀಪಾವಳಿಗಷ್ಟೇ ಮಾರಾಟ ಆಗಬೇಕು. ಈ ಮೊದಲು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಅಕ್ಟೋಬರ್ 14 ರಂದು ಸರಳವಾಗಿ ಕೋವಿಡ್ ಮಾರ್ಗಸೂಚಿಯಂತೆ ಹಬ್ಬ ಆಚರಿಸಬಹುದು ಎಂದು ನೋಟಿಸು ಕೊಟ್ಟಿದ್ದರು. ಹೀಗಾಗಿ ಪಟಾಕಿಗಳನ್ನು ಖರೀದಿಸಲಾಗಿತ್ತು. ಆದರೆ ಈಗ ಏಕಾಏಕಿ ಬ್ಯಾನ್ ಮಾಡಿರುವುದರಿಂದ ಕಷ್ಟವಾಗಿದೆ ಎಂದು ಅವೆನ್ಯೂ ರಸ್ತೆಯ ವ್ಯಾಪಾರಿ ಪರಂಜ್ಯೋತಿ ತಿಳಿಸಿದ್ದಾರೆ.
25 ಮಂದಿ ಸಗಟು ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳು ಈಗಾಗಲೇ ಮೈದಾನಗಳಲ್ಲಿ ಮಾರಾಟ ಮಾಡಲು ತೆಗೆದುಕೊಂಡಿರುವ ಪರವಾನಗಿ ಕೂಡಾ ವ್ಯರ್ಥವಾಗಲಿದೆ. ಈ ನಷ್ಟಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.