ಕರ್ನಾಟಕ

karnataka

ETV Bharat / city

ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧಾರ: ಸಚಿವ ಸಿ.ಪಿ.ಯೋಗೇಶ್ವರ್ - sewage treatment plants

ಕಾವೇರಿ ನದಿಗೆ ಶ್ರೀರಂಗಪಟ್ಟಣ, ಕೊಳ್ಳೇಗಾಲ, ಬನ್ನೂರು, ಟಿ.ನರಸೀಪುರ ಸೇರಿದಂತೆ ನಾಲ್ಕು ಪ್ರಮುಖ ನಗರಗಳ ವ್ಯಾಪ್ತಿಯಲ್ಲಿ ಕೊಳಚೆ ನೀರು ಸೇರುತ್ತಿರುವುದರ ಬಗ್ಗೆ ವರದಿಯಿದ್ದು, ಈ ಪೈಕಿ ಎರಡು ನಗರಗಳಲ್ಲಿ ತಕ್ಷಣವೇ 208 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್

By

Published : Feb 4, 2021, 4:08 PM IST

ಬೆಂಗಳೂರು: ಕಾವೇರಿ ನದಿ ಪಾತ್ರದ ನಗರಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ವಿಧಾನಸಭೆ ಕಲಾಪ

ವಿಧಾನಸಭೆಯಲ್ಲಿ ಇಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಮತ್ತಿತರ ಸದಸ್ಯರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕಾವೇರಿ ನದಿಗೆ ಶ್ರೀರಂಗಪಟ್ಟಣ, ಕೊಳ್ಳೇಗಾಲ, ಬನ್ನೂರು, ಟಿ.ನರಸೀಪುರ ಸೇರಿದಂತೆ ನಾಲ್ಕು ಪ್ರಮುಖ ನಗರಗಳ ವ್ಯಾಪ್ತಿಯಲ್ಲಿ ಕೊಳಚೆ ನೀರು ಸೇರುತ್ತಿರುವುದರ ಬಗ್ಗೆ ವರದಿಯಿದ್ದು, ಈ ಪೈಕಿ ಎರಡು ನಗರಗಳಲ್ಲಿ ತಕ್ಷಣವೇ 208 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕಾವೇರಿ ನದಿ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ಪರಿಶೀಲನೆ ಮಾಡುತ್ತಿದ್ದು, ಕೇಂದ್ರ ನದಿ ನೀರು ಮಾಪನ ಮಂಡಳಿಗೆ ಅದರ ವರದಿ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕಾವೇರಿ ನದಿ ಪಾತ್ರದ ಬಹುತೇಕ ನಗರಗಳಲ್ಲಿ ಇದೇ ರೀತಿ ಕೊಳಚೆ ನೀರು ಸೇರುತ್ತಿರುವ ಕುರಿತು ಕೂಗು ಎದ್ದಿರುವುದರಿಂದ ಈ ಕುರಿತು ವಿವರವಾದ ಮಾಹಿತಿ ಪಡೆದು ಎಲ್ಲೆಲ್ಲಿ ಕೊಳಚೆ ನೀರು ಪರಿಷ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲಿ ಬಹುತೇಕ ನಗರಗಳು ಬರುತ್ತವೆ. ಕಾವೇರಿ ನದಿಗೆ ಕೊಳಚೆ ನೀರು ಸೇರುತ್ತಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ನದಿ ಪಾತ್ರದಲ್ಲಿ ಕೇವಲ ನಾಲ್ಕು ನಗರಗಳು ಮಾತ್ರವಲ್ಲ ಕೊಡಗು ಜಿಲ್ಲೆಯ ಭಾಗಮಂಡಲ, ನಾಪೋಕ್ಲು, ಕುಶಾಲ ನಗರ, ಹುಣಸೂರು ಮತ್ತಿತರೆ ನಗರಗಳ ಮೂಲಕ ಕಾವೇರಿ ನದಿ ನೀರು ಹರಿಯುತ್ತದೆ. ಇಲ್ಲೆಲ್ಲ ನದಿಗೆ ಕೊಳಚೆ ನೀರು ಸೇರುತ್ತಿದೆ ಎಂಬುದನ್ನು ಪರಿಸರ ಇಲಾಖೆ ಏಕೆ ಗಮನಿಸುತ್ತಿಲ್ಲ? ಮತ್ತು ಎಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಯಾಕೆ ಭಾವಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಮಧ್ಯೆ ಕೆಲ ಸದಸ್ಯರು ಮಧ್ಯಪ್ರವೇಶಿಸಿ ಲಕ್ಷ್ಮಣ ತೀರ್ಥ ಸೇರಿದಂತೆ ಇನ್ನೂ ಹಲವು ಕಡೆ ಕೊಳಚೆ ನೀರು ನಿರಂತರವಾಗಿ ಸೇರುತ್ತಿದೆ ಎಂದು ಏರು ಧ್ವನಿಯಲ್ಲಿ ಆರೋಪಿಸಿದರು. ಯಾರು ಯಾರು ಕಾವೇರಿ ನದಿಗೆ ಕೊಳಚೆ ನೀರು ಬಿಡುತ್ತಿದ್ದಾರೋ ಅವರೇ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿ ಎಂದು ಸಲಹೆ ನೀಡಿದರು.

ಸದಸ್ಯರ ಮಾತುಗಳಿಗೆ ಸ್ಪಂದಿಸಿದ ಸಚಿವ ಸಿ.ಪಿ.ಯೋಗೇಶ್ವರ್, ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲಿ ಕೊಳಚೆ ನೀರು ನದಿಗೆ ಸೇರುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಎಲ್ಲೆಲ್ಲಿ ಈ ರೀತಿ ಕೊಳಚೆ ನೀರು ಸೇರುತ್ತಿದೆಯೋ ಅಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಮತ್ತಷ್ಟು ವಿವರವಾದ ಅಧ್ಯಯನ ನಡೆಸಿ ವರದಿ ಪಡೆಯಲಾಗುವುದು ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ABOUT THE AUTHOR

...view details