ಬೆಂಗಳೂರು: 1964 ಗೋ ಹತ್ಯೆ ಕಾನೂನನ್ನೇ ಇನ್ನಷ್ಟು ಕಠಿಣ ರೂಪದಲ್ಲಿ ಜಾರಿಗೆ ತಂದಿದ್ದೇವೆಯೇ ಹೊರತು ಅದರಲ್ಲಿ ಹೊಸತೇನೂ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಸಕ್ತ ಕಾನೂನಿನಲ್ಲಿ 12 ವರ್ಷ ಮೇಲ್ಪಟ್ಟ ಹಸುವನ್ನು ವಧೆ ಮಾಡಬಹುದು ಎಂದಿತ್ತು. ನಾವು ಅದನ್ನು ಈಗ ಮಾಡಬಾರದು ಎಂದಿದ್ದೇವೆ. ಎಮ್ಮೆಯನ್ನು ಮಾತ್ರ 13 ವರ್ಷದ ಬಳಿಕ ವಧೆ ಮಾಡಲು ಅವಕಾಶ ನೀಡಿದ್ದೇವೆ. ಈ ಮುಂಚಿನ ಕಾನೂನು ಜಾರಿ ಆಗುತ್ತಿರಲಿಲ್ಲ. ಈ ಮುಂಚಿನ ಕಾನೂನಿನಲ್ಲಿ ದಂಡ ಹಾಕಲು ಸಾಧ್ಯವಾಗುತ್ತಿರಲಿಲ್ಲ. ವಾಹನ ಜಪ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಜಪ್ತಿ ಮಾಡಿದ ಹಸುವನ್ನು ಏನು ಮಾಡಬೇಕು ಎಂಬುದರ ಬಗ್ಗೆ ನಿಯಮ ಇರಲಿಲ್ಲ. ರೈತ ತನಗೆ ಸಾಕಲು ಆಗಲ್ಲ ಎಂದರೆ ಏನು ಮಾಡಬೇಕು ಎಂಬುದು ಗೊತ್ತಿಲ್ಲ. ಅದಕ್ಕಾಗಿ ಕಾನೂನಿನಲ್ಲಿ ನಿಯಮ ರೂಪಿಸಿದ್ದೇವೆ ಎಂದು ವಿವರಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಹೊಸತೇನೂ ಇಲ್ಲ ಎಂದ ಸಚಿವ ಮಾಧುಸ್ವಾಮಿ ತಾಲೂಕು ಮಟ್ಟದಲ್ಲಿ ಪ್ರಾಧಿಕಾರವನ್ನು ಮಾಡಿ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ದಂಡವನ್ನು ಸೇರ್ಪಡೆಗೊಳಿಸಿದ್ದೇವೆ. ಅದರ ಬದಲು ಬೇರೆ ಏನೂ ಮಾಡಿಲ್ಲ. ಪ್ರಸಕ್ತ ಇರುವ ಕಾನೂನನ್ನು ಇನ್ನಷ್ಟು ಕಠಿಣವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾನೂನು ತಂದಿದ್ದೇವೆ ಎಂದರು.
ಓದಿ-ರಾಜ್ಯದಲ್ಲಿಂದು 653 ಕೊರೊನಾ ಕೇಸ್ ಪತ್ತೆ: 8 ಸೋಂಕಿತರು ಬಲಿ
ಗೋಹತ್ಯೆ ಕಾಯ್ದೆ ಇಂದಿನದು ಅಲ್ಲ
ಗೋ ಸಂರಕ್ಷಣೆ ಮಾಡಬೇಕು ಎಂಬುದು ಮಹಾತ್ಮ ಗಾಂಧಿಯವರ ಅಭಿಪ್ರಾಯ. ಇದು ಸಂಘ ಪರಿವಾರ ಅಥವಾ ಬಿಜೆಪಿಯವರ ಕಾರ್ಯಕ್ರಮ ಅಲ್ಲ. 1964ರಿಂದ ಗೋ ಹತ್ಯೆಗೆ ನಿರ್ಬಂಧ ಇದ್ದ ಕಾಯ್ದೆಗೆ ಇಷ್ಟೊಂದು ವ್ಯಾಖ್ಯಾನ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಈವರೆಗೆ ಬೇರೆ ಸರ್ಕಾರ ಇದ್ದಾಗಲೂ ಪ್ರಸಕ್ತ ಗೋ ಹತ್ಯೆ ನಿಷೇಧ ಕಾನೂನನ್ನು ರದ್ದು ಮಾಡಿಲ್ಲ ಎಂದು ಟಾಂಗ್ ನೀಡಿದರು.
ಬೀಫ್ ತಿನ್ನಲು ಅಡ್ಡಿ ಇಲ್ಲ
ರಾಜ್ಯದಲ್ಲಿ ಬೀಫ್ ಮಾರಾಟ ಮಾಡಬಹುದು. ಬೀಫ್ ತಿನ್ನಬಹುದಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು. ಈ ಹೊಸ ಕಾನೂನು ಜಾರಿಯಾದರೆ ಕಸಾಯಿಖಾನೆ ಇರಲ್ಲ. ಬೀಫ್ ಮಾರಾಟ ಮಾಡಲಾಗುವುದಿಲ್ಲ. ಚರ್ಮವನ್ನು ಬಳಸಲು ಬಿಡಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅದ್ಯಾವುದಕ್ಕೂ ನಿರ್ಬಂಧ ಇಲ್ಲ. ಎಮ್ಮೆಯನ್ನು 13 ವರ್ಷ ಬಳಿಕ ವಧೆ ಮಾಡಬಹುದಾಗಿದೆ. ಹಾಗಾಗಿ ಕಸಾಯಿಖಾನೆ ಇರಲಿದೆ. ಬೀಫ್ ಮಾರಾಟ ಮಾಡಬಹುದಾಗಿದೆ. ಬೀಫ್ ತಿನ್ನಬಹುದಾಗಿದೆ. ಅದಕ್ಕೆ ನಿರ್ಬಂಧ ಇಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ರೈತ ಕುಟುಂಬದವರು, ನಾನೂ ರೈತ ಕುಟುಂಬದವನೇ. ನಾವು ಹಲ್ಲು ಎಣಿಸಿ ಹಸುವಿನ ವಯಸ್ಸು ಕಂಡು ಹಿಡಿಯುತ್ತಿದ್ದೆವು. ಈಗ ಕ್ರಾಸ್ ಬ್ರೀಡ್ ಆದಾಗ ಅದನ್ನು ಪತ್ತೆ ಹಚ್ಚುವುದು ಕಷ್ಟ ಆಗಿದೆ. ಅದಕ್ಕಾಗಿ ವಯಸ್ಸಿನ ನಿಯಮವನ್ನು ತೆಗೆದು ಹಾಕಿದ್ದೇವೆ. ಅವರು ಆಡಳಿತದಲ್ಲಿ ಇದ್ದಾಗಲೂ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿಲ್ಲ. ಈಗ ಮಾಡಬಾರದ್ದು ಮಾಡಿದ್ದಾರೆ ಅಂತ ರಾಜಕೀಯ ಮೈಲೇಜು ತಗೋತಿದಾರೆ ಎಂದು ಟೀಕಿಸಿದರು.