ಬೆಂಗಳೂರು:ಕೋವಿಡ್ ಲಸಿಕೆ ಸೋಂಕಿನ ತೀವ್ರತೆ ಹಾಗೂ ಸಂಭವಿಸಬಹುದಾದ ಸಾವನ್ನ ತಪ್ಪಿಸಬಹುದೇ ಹೊರತು ಸೋಂಕು ಬರುವುದನ್ನ ತಪ್ಪಿಸಲು ಆಗುವುದಿಲ್ಲ. ಹೀಗಾಗಿ ಜನರು ಇದನ್ನ ತಪ್ಪು ತಿಳಿದುಕೊಳ್ಳಬಾರದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಲಸಿಕೆ ಸಂಭವಿಸಬಹುದಾದ ಸಾವು ತಪ್ಪಿಸುತ್ತದೆಯೇ ಹೊರತು ಸೋಂಕು ಬರುವುದನ್ನ ಅಲ್ಲ - ಸಚಿವ ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿದ ಅವರು, ಲಸಿಕೆ ಹಾಕಿಸಿಕೊಳ್ಳುವುದರಿಂದ ಖಂಡಿತವಾಗಿ ನಿಮ್ಮ ಪ್ರಾಣವನ್ನ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಮೂರನೇ ಡೋಸ್ ತೆಗೆದುಕೊಳ್ಳಲು ಯಾರಿಗೆ ಅರ್ಹತೆ ಇದೆಯೋ ಅವರು ದಯವಿಟ್ಟು ಲಸಿಕೆ ಪಡೆದುಕೊಂಡು ಅಪಾಯದಿಂದ ಪಾರಾಗಿ ಎಂದು ಮನವಿ ಮಾಡಿದ್ದಾರೆ. 15-17 ವರ್ಷ ವಯಸ್ಸಿನ ಮಕ್ಕಳ ಲಸಿಕೆ ಶೇ.60ರಷ್ಟು ಆಗಿದ್ದು, ಆದಷ್ಟು ಬೇಗ ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಅಂತ ಪೋಷಕರಲ್ಲೂ ಮನವಿ ಮಾಡುತ್ತೇನೆ ಎಂದು ಹೇಳಿದರು.
'ವೀಕೆಂಡ್ ಕರ್ಫ್ಯೂ ಕುರಿತು ಅಭಿಪ್ರಾಯ ಸಂಗ್ರಹ'
ವೀಕೆಂಡ್ ಕರ್ಫ್ಯೂ ಬೇಕು ಬೇಡ ಎಂಬ ಭಿನ್ನಾಭಿಪ್ರಾಯಗಳು ಸರ್ಕಾರದ ಮಟ್ಟದಲ್ಲೇ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಎಲ್ಲರ ಅಭಿಪ್ರಾಯಗಳನ್ನ ಸಂಗ್ರಹ ಮಾಡುತ್ತಿದ್ದೇವೆ. ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿಯಿಂದ ಶುರುವಾಗುತ್ತೆ, ಹೀಗಾಗಿ ಅಂದು ಬೆಳಗ್ಗೆಯೇ ಸಿಎಂ ಸಭೆ ಕರೆದಿದ್ದು ಇದರ ಸಾಧಕ ಬಾಧಕ ಚರ್ಚೆ ಮಾಡುತ್ತಾರೆ. ಎರಡು ಮೂರು ದಿನದ ಸೋಂಕಿನ ಪ್ರಭಾವ ಯಾವ ರೀತಿ ಆಗ್ತಿದೆ ಎಂಬುದು ತಿಳಿಯಲಿದೆ. ಆ ಪ್ರಕಾರ ಜನಪರ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದರು.
ಶಾಲಾ ಮಕ್ಕಳು ಶಿಕ್ಷಕರಲ್ಲಿ ಹೆಚ್ಚಿದ ಸೋಂಕು
ರಾಜ್ಯದಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವ ಬಗ್ಗೆ ಮಾತಾನಾಡಿದ ಸಚಿವರು, ಮಕ್ಕಳಲ್ಲಿ ಸೋಂಕು ಜಾಸ್ತಿ ಆಗಿದೆ. ಆದರೆ, ಮಕ್ಕಳಲ್ಲಿ ಸೋಂಕು ಬಂದರೂ ತೀವ್ರ ತರಹ ವ್ಯಾದಿ ಉಂಟಾಗಿಲ್ಲ ಹಾಗೂ ಸಾವು ಆಗಿಲ್ಲ. ಶಾಲಾ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಲಸಿಕೆ ಆಗದೇ ಇರುವುದು. ಹೀಗಾಗಿ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಆದರೆ, ಮಕ್ಕಳಲ್ಲೇ ಸ್ವಾಭಾವಿಕ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಇದು ಸಮಾಧಾನಕರವಾಗಿದೆ ಎಂದು ಹೇಳಿದರು.
'ಸರ್ಕಾರ ಅನುಮತಿ ನೀಡಿದ ವೈದ್ಯರು ಮಾತ್ರ ಹೇಳಿಕೆ ನೀಡಿ'
ಕೋವಿಡ್ ಸೋಂಕಿನ ಕುರಿತು ವೈದ್ಯರು ಹೇಳಿಕೆ ನೀಡಿರುವ ಕುರಿತು ಮಾತಾನಾಡಿದ ಸಚಿವ ಸುಧಾಕರ್, ವೈದ್ಯರಿಂದ ಇಂತಹ ಹೇಳಿಕೆಗಳನ್ನ ನಿರೀಕ್ಷೆ ಮಾಡಿರಲಿಲ್ಲ. ಕೆಲವರು ಪ್ರಚೋದನೆ ಒಳಗಾಗುವ ಮಾತುಗಳನ್ನ ಹೇಳುತ್ತಿದ್ದಾರೆ. ಹೀಗಾಗಿಯೇ ಸರ್ಕಾರ ಅಧಿಕೃತ ವೈದ್ಯರು ಅಷ್ಟೇ ಹೇಳಿಕೆ ಕೊಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ 14 ತಜ್ಞ ವೈದ್ಯರು ಅಷ್ಟೇ ಮಾತನಾಡಬೇಕು. ಇತರರು ಯಾರು ಮಾತನಾಡುವ ಹಾಗೇ ಇಲ್ಲ ಅಂತ ತಿಳಿಸಿದರು.
ಕೋವಿಡ್ ಮೂರನೇ ಅಲೆಯಲ್ಲಿ ಗಣನೀಯವಾಗಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ನಿತ್ಯ 40 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಂದಿನ ಎರಡು ವಾರಗಳಲ್ಲಿ ನಿತ್ಯ ಒಂದು ಲಕ್ಷ ಸೋಂಕು ಪತ್ತೆಯಾಗುವ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ. ಇತ್ತ ಹೆಚ್ಚು ಹೆಚ್ಚು ಲಸಿಕಾಭಿಯಾನಕ್ಕೆ ಒತ್ತು ನೀಡಿದರೂ ಕೊರೊನಾ ಹರಡುವಿಕೆ ಮಾತ್ರ ನಿಯಂತ್ರಣಕ್ಕೆ ಸಿಗುತ್ತಿಲ್ಲ.
ಇದನ್ನೂ ಓದಿ:ಕೋವಿಡ್ ಲಸಿಕೆ ಬಗ್ಗೆ ವಿಶೇಷ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸಿಎಂ