ಬೆಂಗಳೂರು: ಕೋವಿಡ್ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಲಸಿಕೆ ವಿತರಣೆ ಹೆಚ್ಚು ಮಾಡಲು ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲೂ ಖಾಸಗಿ ಆಸ್ಪತ್ರೆಗಳಿಂದ ತಾತ್ಕಾಲಿಕ ಆರೋಗ್ಯ ಉಪಕೇಂದ್ರ ನಿರ್ಮಿಸಿ, ಲಸಿಕೆ ವಿತರಿಸಲು ಬಿಬಿಎಂಪಿಯಿಂದ ಅನುಮತಿ ಸಿಕ್ಕಿದೆ. ಪ್ರತಿನಿತ್ಯ ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ ನೂರಕ್ಕೂ ಹೆಚ್ಚು ಫಲಾನುಭವಿಗಳು ಲಸಿಕೆ ಪಡೆಯುತ್ತಿದ್ದಾರೆ.
ನಗರದ ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ ಖಾಸಗಿ ಆಸ್ಪತ್ರೆಗಳು ತಾತ್ಕಾಲಿಕ ಸಿದ್ಧತೆಗಳೊಂದಿಗೆ ಲಸಿಕೆ ನೀಡಲು ಆರಂಭಿಸಿವೆ. ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟವರೂ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಜೆಪಿ ನಗರದ ಬ್ರಿಗೇಡ್ ಮಿಲೇನಿಯಮ್ ಅಪಾರ್ಟ್ಮೆಂಟ್ನಲ್ಲಿ ಬ್ಲಾಸಮ್ ಆಸ್ಪತ್ರೆ ಆರೋಗ್ಯ ಉಪಕೇಂದ್ರ ತೆರೆದಿದ್ದು, ಶುಕ್ರವಾರದಿಂದ ಪ್ರತಿನಿತ್ಯ ನೂರಕ್ಕೂ ಹೆಚ್ಚು ಜನ ಲಸಿಕೆ ಪಡೆದಿದ್ದಾರೆ. 29 ಅಪಾರ್ಟ್‌ಮೆಂಟ್ ಗಳಿಂದ ಲಸಿಕೆ ವಿತರಿಸಲು ಅವಕಾಶ ನೀಡುವಂತೆ ಪಾಲಿಕೆಗೆ ಮನವಿ ಬಂದಿವೆ.