ಬೆಂಗಳೂರು :ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿದ್ದರೂ 3ನೇ ಅಲೆ ಭೀತಿ ಇದ್ದೇ ಇದೆ. ಅದರಲ್ಲಿಯೂ ಕೇಂದ್ರ ಸರ್ಕಾರ 3ನೇ ಅಲೆ ಕುರಿತು ರಾಜ್ಯಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಇವೆ. ಈ ಹಿನ್ನೆಲೆ ಇದೀಗ ಮುಂಚಿತವಾಗಿಯೇ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಎರಡು ತಿಂಗಳಲ್ಲಿ ದಸರಾ, ದೀಪಾವಳಿ, ಮಹಾಲಯ ಅಮವಾಸ್ಯೆ ಸೇರಿ ಸಾಲು ಸಾಲು ಹಬ್ಬಗಳು ಬರಲಿವೆ. ಹಬ್ಬಕ್ಕೂ ಮೊದಲೇ ಎಚ್ಚೆತ್ತು ಹೊಸ ಮಾರ್ಗಸೂಚಿಯನ್ನ ಪ್ರಕಟಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ಮೊನ್ನೆ (ಬುಧವಾರ) ನಡೆದ ವಿಡಿಯೋ ಸಂವಾದದಲಿ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಅಕ್ಟೋಬರ್ ಅಂತ್ಯದವರೆಗೂ ಸೂಕ್ಷ್ಮವಾಗಿ ನಿಗಾವಹಿಸಿ. ಹೆಚ್ಚೆಚ್ಚು ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಷನ್‌ಗೆ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯ ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ. ಮುಂದೆ ಬರುವ ಹಬ್ಬಗಳ ಮೇಲೂ ನಿಗಾವಹಿಸುವಂತೆ ಸೂಚಿಸಿದ್ದಾರೆ.
ಗಣೇಶ ಹಬ್ಬದ ಪರಿಣಾಮ ತಿಳಿಯಲು ಕನಿಷ್ಟ ಎರಡು ವಾರವಾದರೂ ಕಳೆಯಬೇಕು. ಅನಂತರವಷ್ಟೇ ಹಬ್ಬದಿಂದ ಸೋಂಕು ಹರಡಿದೆಯಾ?, ಇಲ್ವಾ? ಎಂದು ತಿಳಿಯುತ್ತದೆ. ಇದೆಲ್ಲಾ ಏನೇ ಇದ್ದರೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮಾಡುವುದು ನಮ್ಮ ಕೆಲಸ. ಹೆಚ್ಚು ವ್ಯಾಕ್ಸಿನೇಷನ್ ಮಾಡುತ್ತಿರುವುದು ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಬ್ಬದ ಆಚರಣೆಗೆ ಇರುವ ಮಾರ್ಗ ಸೂಚಿಗಳು :
- ಸಾಲು ಸಾಲು ಹಬ್ಬಗಳ ಮೇಲೆ ನಿಗಾವಹಿಸಿ
- ಜನರ ಗುಂಪು ಗೂಡುವಿಕೆಯನ್ನ ನಿಯಂತ್ರಣ ಮಾಡಬೇಕು
- ಕಂಟೇನ್ಮೆಂಟ್ ಝೋನ್ಗಳಲ್ಲಿ ಕಡ್ಡಾಯವಾಗಿ ಜನರ ಸೇರುವಿಕೆ ನಿಯಂತ್ರಿಸಬೇಕು
- ಒಂದು ವೇಳೆ ಜನ ಸೇರುವಿಕೆ ಅನಿರ್ವಾಯವಾದರೆ ಅದಕ್ಕೆ ಮೊದಲೇ ಅನುಮತಿ ಪಡೆಯಬೇಕು
- ಕನಿಷ್ಠ ಜನರ ಸೇರುವಿಕೆಗೆ ಮಾತ್ರ ಅನುಮತಿ ನೀಡುವಂತೆ ಕೇಂದ್ರ ಸೂಚನೆ ನೀಡಿದೆ
- ಪಾಸಿಟಿವ್ ದರ ಶೇ.5ರಷ್ಟು ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಕನಿಷ್ಟ ಜನ ಸೇರುವಿಕೆಗೆ ಅನುಮತಿಸಬೇಕು
- ನಿಯಮಗಳ ಸಡಿಲಿಕೆ ಹಾಗೂ ನಿರ್ಬಂಧಗಳನ್ನ ವಿಧಿಸುವುದು
- ಇದಕ್ಕಾಗಿ ಒಂದು ವಾರದ ಕೇಸ್ ಪಾಸಿಟಿವಿಟಿ ದರವನ್ನ ಪರಿಗಣನೆ ಮಾಡಬೇಕು