ಪ್ರತಿದಿನ 75 ಸಾವಿರ ಕೋವಿಡ್ ಟೆಸ್ಟ್; ಪ್ರತಿನೂರಕ್ಕೆ 13 ಮಂದಿಯಲ್ಲಿ ಕಿಲ್ಲರ್ ಮಹಾಮಾರಿ - Corona test
ರಾಜ್ಯಕ್ಕೆ ಕೊರೊನಾ ಕಾಲಿಟ್ಟಾಗಿನಿಂದ ಈವರೆಗೂ ಸೋಂಕಿತರ ಸಂಖ್ಯೆ 3,98,551ಕ್ಕೆ ತಲುಪಿದ್ದು, ಅದರಲ್ಲಿ 6393 ಮಂದಿ ಬಲಿಯಾಗಿದ್ದಾರೆ. ದಾಖಲಾದ ಒಟ್ಟು ಪ್ರಕರಣಗಳಲ್ಲಿ 2,92,873 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 99,266 ಸಕ್ರಿಯ ಪ್ರಕರಣಗಳು ಬಾಕಿ ಇವೆ.
ಕೊರೊನಾ ಪರೀಕ್ಷೆ
By
Published : Sep 7, 2020, 6:41 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ನಾಲ್ಕು ಲಕ್ಷದ ಸಮೀಪಕ್ಕೆ ಬಂದಿದ್ದು, ಪ್ರತಿ ದಿನ 70 ಸಾವಿರಕ್ಕೂ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ. ಅದರಲ್ಲಿ ಶೇ.12-14ರಷ್ಟು ಪ್ರಮಾಣದಲ್ಲಿ ಕೊರೊನಾ ಸೋಂಕು ದೃಢಪಡುತ್ತಿದೆ.
ರಾಜ್ಯದಲ್ಲಿ ಮಾರ್ಚ್ 8ರಂದು ಮೊದಲ ಕೊರೊನಾ ಸೋಂಕು ದೃಢಪಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೆ ಆರು ತಿಂಗಳ ಅವಧಿಯಲ್ಲಿ ಸೋಂಕಿತರ ಪ್ರಮಾಣ 3,98,551ಕ್ಕೆ ತಲುಪಿದೆ. ಪ್ರತಿದಿನ 6-9 ಸಾವಿರ ಸರಾಸರಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಡುತ್ತಿದೆ. ಇದಕ್ಕೆ ತಕ್ಕಂತೆ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಬರಲಾಗಿದೆ.
ಮೂರು ತಿಂಗಳ ಅವಲೋಕನ
ತಿಂಗಳು
ಕೋವಿಡ್ ಪರೀಕ್ಷೆ
ದೃಢಪಟ್ಟ ಸೋಂಕಿತರು
ಪ್ರತಿ ನೂರು ಮಂದಿಗೆ ಸೋಂಕು (ಶೇಕಡವಾರು)
ಜೂನ್
3,15,931
11,834
ಶೇ.3.75
ಜುಲೈ
7,30,045
1,08,873
ಶೇ.14.91
ಆಗಸ್ಟ್
15,45,015
2,18,308
ಶೇ.14.91
ಸೆಪ್ಟೆಂಬರ್ (6 ದಿನ ಮಾತ್ರ)
3,68,778
47,070
ಶೇ.12.76
ಜೂನ್ ತಿಂಗಳಲ್ಲಿ ಕೊರೊನಾ ತಪಾಸಣೆ ಚುರುಕುಗೊಳಿಸಲಾಗಿದೆ. ಈವರೆಗೂ ಕೇವಲ ಆರ್‌ಟಿಪಿಸಿಆರ್ ಪರೀಕ್ಷೆ ಮಾತ್ರ ನಡೆಸುತ್ತಿದ್ದು, ಜುಲೈ ಮಧ್ಯ ಭಾಗದಿಂದ ಆ್ಯಂಟಿಜನ್ ಪರೀಕ್ಷೆಯನ್ನು ಆರಂಭಿಸಲಾಯಿತು. ಹಾಗಾಗಿ ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಯಿತು. ಆಗಸ್ಟ್ ತಿಂಗಳಿನಲ್ಲಿ ಕೋವಿಡ್-19 ಪರೀಕ್ಷೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ತಿಂಗಳೊಂದರಲ್ಲೇ ದಾಖಲೆಯ ತಪಾಸಣೆ ನಡೆಸಲಾಗಿದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ 33,48,255 ಕೋವಿಡ್-19 ಪರೀಕ್ಷೆ ನಡೆಸಿದ್ದು, ಅದರಲ್ಲಿ 3,98,551 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ತಪಾಸಣೆ ಮಾಡಿದ ಪ್ರತಿ ನೂರು ಜನರಲ್ಲಿ ಶೇ.11.90ರ ಸರಾಸರಿಯಂತೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಗೆಯೇ ಸೆಪ್ಟೆಂಬರ್ ತಿಂಗಳ ಆರು ದಿನಗಳಲ್ಲಿ ಈಗಾಗಲೇ 47 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.
ಕೊರೊನಾ ತಪಾಸಣೆ ಕುರಿತು ಸರ್ಕಾರದಿಂದ ಮಾಹಿತಿ
ರಾಜ್ಯದಲ್ಲಿ ಆ್ಯಂಟಿಜೆನ್ ಪರೀಕ್ಷೆ ಪರಿಚಯ ಮಾಡಿದ ದಿನವಾದ ಜುಲೈ 18ರಂದು ಪ್ರತಿ ನೂರರ ಪೈಕಿ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅದಾದ ತಿಂಗಳ ನಂತರ ಆಗಸ್ಟ್ 18ರಂದು ಅದೇ ರೀತಿ ತಪಾಸಣೆ ನಡೆಸಿದಾಗ ಶೇ.12.97 ಜನರಲ್ಲಿ ಮತ್ತು ಸೆಪ್ಟೆಂಬರ್ 6ರಂದು ನಡೆದ ಪರೀಕ್ಷೆಯಲ್ಲಿ ಪ್ರತಿ ನೂರಿಗೆ ಶೇ.12.52 ಜನರಲ್ಲಿ ಕೊರೊನಾ ದೃಢಪಟ್ಟಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ಅಂತಹ ವ್ಯತ್ಯಾಸವೇನು ಕಂಡುಬಂದಿಲ್ಲ. ಆದರೂ, ಸರಾಸರಿ ಪ್ರಮಾಣದಲ್ಲಿ ಪ್ರತಿ ನೂರು ಜನರ ತಪಾಸಣೆಯಲ್ಲಿ 14.91 ರಿಂದ 14.13ಕ್ಕೆ ಕುಸಿತ ಕಂಡಿರುವುದಕ್ಕಷ್ಟೇ ಸಮಾಧಾನಪಟ್ಟುಕೊಳ್ಳಬೇಕಿದೆ.
ಸಮುದಾಯಕ್ಕೆ ಹಬ್ಬಿಲ್ಲ: ಸಚಿವ ಸ್ಪಷ್ಟನೆ
ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗಿದ್ದರೂ ಸಮುದಾಯಕ್ಕೆ ಹರಡಿದೆ ಎನ್ನುವುದನ್ನು ಆರೋಗ್ಯ ಇಲಾಖೆ ತಳ್ಳಿಹಾಕಿದೆ. ಈ ಕುರಿತು ದೂರವಾಣಿ ಮೂಲಕ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಕಾರಣದಿಂದ ಪಾಸಿಟಿವ್ ದೃಢವಾಗುತ್ತಿರುವ ಸಂಖ್ಯೆಯಲ್ಲಿ ಸಹಜವಾದ ಹೆಚ್ಚಳ ಕಂಡುಬಂದಿದೆ ಎಂದರು.
ನಾವು ಪ್ರತಿದಿನ 10 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ಗುರಿ ಇರಿಸಿಕೊಂಡು ಕೆಲಸ ಆರಂಭಿಸಿ, ನಂತರ ಅದನ್ನು 25 ಸಾವಿರ, 50 ಸಾವಿರಕ್ಕೆ ವಿಸ್ತರಣೆ ಮಾಡಿದೆವು. ಈಗ ಒಂದು ಲಕ್ಷದ ಗುರಿಯಲ್ಲಿದ್ದೇವೆ. 75 ಸಾವಿರ ಜನರ ತಪಾಸಣೆ ಮಾಡುತ್ತಿದ್ದೇವೆ. ಆದರೂ, ಸರಾಸರಿ ಲೆಕ್ಕದಲ್ಲಿ ಅಂತಹ ವ್ಯತ್ಯಾಸ ಇಲ್ಲ. ಪ್ರತಿ ನೂರರಲ್ಲಿ 12-14 ಜನರಿಗೆ ಸೋಂಕು ದೃಢಪಡುತ್ತಿದೆ. ಕಳೆದ ಮೂರು ತಿಂಗಳಿನಿಂದಲೂ ಇದೇ ಸರಾಸರಿ ಇದೆ ಹಾಗಾಗಿ ಸಮುದಾಯಕ್ಕೆ ಹರಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮಾತನಾಡಿ, ಲಾಕ್ಡೌನ್ ತೆರವುಗೊಳಿಸಿ ಫ್ರೀಡೌನ್ ಜಾರಿಯಾಗುತ್ತಿದ್ದಂತೆ ನಾವು ಕೂಡ ಹಂತಹಂತವಾಗಿ ತಪಾಸಣಾ ಸಾಮರ್ಥ್ಯ ಹೆಚ್ಚಿಸಿದ್ದೇವೆ. ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ ಸರಾಸರಿಯಲ್ಲಿ ಅಂತಹ ವ್ಯತ್ಯಾಸವಿಲ್ಲ. ಎಲ್ಲಾ ರೀತಿಯಲ್ಲಿಯೂ ಆರೋಗ್ಯ ಇಲಾಖೆ ಸನ್ನದ್ದವಾಗಿದ್ದು, ಕೊರೊನಾ ನಿಯಂತ್ರಣದಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದಿದ್ದಾರೆ.