ಬೆಂಗಳೂರು: ಕೊರೊನಾ ಮೂರನೇ ಅಲೆ ಹಾಗೂ ರೂಪಾಂತರಿ ಒಮಿಕ್ರಾನ್ ಅಪಾರ್ಟ್ಮೆಂಟ್ ನಿವಾಸಿಗಳನ್ನು ಹೆಚ್ಚು ಹೈರಾಣಾಗಿಸುತ್ತಿದೆ. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಪಾಲಿಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ಅಪಾರ್ಟ್ಮೆಂಟ್, ಹೌಸಿಂಗ್ ಸೊಸೈಟಿ ಹಾಗೂ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಅಪಾರ್ಟ್ಮೆಂಟ್ನ ಒಂದು ಫ್ಲೋರ್ನಲ್ಲಿ ಮೂರು ಅಥವಾ ಮೂರಕ್ಕಿಂತ ಹೆಚ್ಚು ಕೋವಿಡ್ ಸೋಂಕು ದೃಢಪಟ್ಟರೆ ಆ ಮಹಡಿಯನ್ನು ಸೀಲ್ ಮಾಡಲಾಗುತ್ತೆ. ಮನೆಯಲ್ಲಿ ಒಂದು ಕೋವಿಡ್ ಪ್ರಕರಣವಿದ್ದರೆ ಆ ಮನೆಯನ್ನು ಮಾತ್ರ ಕಂಟೈನ್ಮೆಂಟ್ ಹಾಗೂ ಅಪಾರ್ಟ್ಮೆಂಟ್ನಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಸೋಂಕು ದೃಢಪಟ್ಟರೆ ಇಡೀ ಅಪಾರ್ಟ್ಮೆಂಟ್ ಅನ್ನೇ 7 ದಿನಗಳ ಕಾಲ ಕಂಟೈನ್ಮೆಂಟ್ ಮಾಡಲು ಪಾಲಿಕೆ ನಿರ್ಧರಿಸಿದೆ. ಕಂಟೈನ್ಮೆಂಟ್ ಘೋಷಣೆಯಾದ ಬಳಿಕ ಅಲ್ಲಿರುವ ಎಲ್ಲರೂ ಕೋವಿಡ್ ಟೆಸ್ಟ್ಗೆ ಒಳಗಾಗಬೇಕು.
ಇನ್ನು ಅಪಾರ್ಟ್ಮೆಂಟ್ಗೆ ಬರುವ ಸಂದರ್ಶಕರು, ಮನೆಗೆಲಸದವರು ಸೇರಿದಂತೆ ಯಾರೇ ಬಂದರೂ ಕಡ್ಡಾಯವಾಗಿ ದೇಹದ ಉಷ್ಣತೆ ಪರಿಶೀಲಿಸಿ, ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿರಬೇಕೆಂದು ನಿಯಮ ಮಾಡಲಾಗಿದೆ.
ನಿಯಮಗಳು:
- ಸಾಮಾನ್ಯವಾಗಿ ಎಲ್ಲರೂ ಬಳಸುವ ಸ್ಥಳಗಳಾದ ನೆಲ, ಮೆಟ್ಟಿಲನ್ನು ಆಗಾಗ ಸ್ಯಾನಿಟೈಸ್ ಮಾಡುವುದು.
- ನಡಿಗೆ ದಾರಿಗಳು ಹಾಗೂ ಪಾರ್ಕ್ಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು. ಇಲ್ಲಿ ಜನ ಸೇರುವುದನ್ನು ತಪ್ಪಿಸಬೇಕು.
- ಕೋವಿಡ್ ಲಸಿಕೆ ಪಡೆಯಲು ಸಾಮಾಜಿಕ ಜಾಲತಾಣ ಬಳಸಿ ಪ್ರೇರೇಪಿಸಬೇಕು.
- ಜಿಮ್, ಈಜುಕೊಳ ಬಳಕೆ ನಿಷಿದ್ಧ.
- ಮಕ್ಕಳೂ ಕೂಡ ಆಟದ ಸಮಯದಲ್ಲಿ, ತೆರೆದ ಜಾಗಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
- ಕಮ್ಯುನಿಟಿ ಹಾಲ್, ಕ್ಲಬ್ ಹೌಸ್ಗಳ ಕಾರ್ಯಕ್ರಮಕ್ಕೆ ಮಿತಿ ಹೇರಬೇಕು, ಗರಿಷ್ಠ 50 ಜನ ಸೇರಲು ಮಾತ್ರ ಅವಕಾಶ.
- ಹೌಸಿಂಗ್ ಸೊಸೈಟಿಗಳು ನಿಗದಿತ ಸ್ಥಳದಲ್ಲಿಯೇ ಕಸ ಪ್ರತ್ಯೇಕಿಸಬೇಕು.
- ಲಿಫ್ಟ್ ಪ್ರವೇಶ ದ್ವಾರ, ಬಟನ್ಗಳನ್ನು ಸ್ಯಾನಿಟೈಸ್ ಮಾಡಬೇಕು.
- ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿರುವವರು ಕಡ್ಡಾಯವಾಗಿ ಹೋಂ ಐಸೋಲೇಷನ್ ಆಗಬೇಕು.
- ಕೋವಿಡ್ ನಿಯಮ ಪಾಲಿಸಿ ಸಾಕು ಪ್ರಾಣಿಗಳನ್ನು ವಾಕ್ಗೆ ಕರೆದುಕೊಂಡು ಹೋಗಬಹುದು.
- ಮನೆಗೆಲಸದವರು, ಸೆಕ್ಯುರಿಟಿ ಗಾರ್ಡ್ ಹಾಗೂ ಎಲ್ಲ ಸಿಬ್ಬಂದಿ ಎರಡೂ ಡೋಸ್ ವ್ಯಾಕ್ಸಿನ್ ಪಡೆದಿರಬೇಕು.
- ಬಿಬಿಎಂಪಿ ಆರೋಗ್ಯ ವಿಭಾಗದ ಬಳಿ ಒಬ್ಬರು ಸಂಪರ್ಕದಲ್ಲಿರಬೇಕು.
ಇದನ್ನೂ ಓದಿ:ಕೋವಿಡ್ ಟೆಸ್ಟ್ ರಿಸಲ್ಟ್ ನೋಡಲು ಇಲ್ಲಿದೆ ನೋಡಿ ಸುಲಭ ಮಾರ್ಗ