ಬೆಂಗಳೂರು :ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಾಗ ಮಕ್ಕಳು ಕೂಡ ಸೋಂಕಿಗೆ ಒಳಗಾಗುವ ಅಪಾಯವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಮೂರನೇ ಅಲೆ ಮಕ್ಕಳನ್ನು ಬಾಧಿಸದಂತೆ ತಡೆಯಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಓದಿ: ರಾಜ್ಯದಲ್ಲಿ ತಗ್ಗಿದ ಕೊರೊನಾ: ದಾಖಲೆಯ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖ
ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚು ಎನ್ನುವ ವರದಿ ಬಂದಿರುವುದನ್ನು ನಿಯಂತ್ರಿಸಲು ಈಗಲೇ ಸಿದ್ಧತೆ ಆರಂಭಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳ ತಜ್ಞರ ನೇಮಕಕ್ಕೆ ಕ್ರಮ ಕೈಗೊಂಡಿದ್ದೇವೆ. ಮಕ್ಕಳ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ (ಐಸಿಯು) ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಕ್ಕೂ ಕ್ರಮ ಕೈಗೊಂಡಿದ್ದೇವೆ. ಸಾಮಾನ್ಯ ಹಾಸಿಗೆಗಳನ್ನು ಐಸಿಯು ಹಾಸಿಗೆಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲೂ ಸಿದ್ಧತೆಗಳು ನಡೆದಿವೆ. ಆಮ್ಲಜನಕದ ಕೊರತೆ ಕಾಡಬಾರದು ಎಂಬ ಉದ್ದೇಶದಿಂದ ಪ್ರತಿ ಆಸ್ಪತ್ರೆಯಲ್ಲೂ ಆಮ್ಲಜನಕ ಘಟಕ ಸ್ಥಾಪಿಸುವ ಚಿಂತನೆ ಇದೆ ಎಂದು ವಿವರಿಸಿದ್ದಾರೆ.
ವರದಿ ಮತ್ತು ತಜ್ಞರ ಅಭಿಪ್ರಾಯ :ಕೊರೊನಾ 3ನೇ ಅಲೆ ಮಕ್ಕಳನ್ನು ಗುರಿ ಮಾಡಿಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಮಕ್ಕಳಿಗೆ ವಯಸ್ಕರಿಗೆ ಸಿಕ್ಕ ಟ್ರೀಟ್ಮೆಂಟ್‌ಗಿಂತ ಸೂಕ್ಷ್ಮ ಟ್ರೀಟ್ಮೆಂಟ್ ಅಗತ್ಯ ಬೀಳಲಿದೆ.
ಆದರೆ, ನಮ್ಮಲ್ಲಿ ಮಕ್ಕಳ ತಜ್ಞರ ಕೊರತೆ ಇದೆ. ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ (ಐಎಪಿ) ಅನ್ವಯ ನಮ್ಮ ರಾಜ್ಯದಲ್ಲಿ ಇರುವುದು ಕೇವಲ 3 ಸಾವಿರ ಮಕ್ಕಳ ತಜ್ಞ ವೈದ್ಯರು. ಈ ಪೈಕಿ 1200 ಮಕ್ಕಳ ವೈದ್ಯರು ಬೆಂಗಳೂರಿನಲ್ಲಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ 5 ವರ್ಷದೊಳಗಿನ ಮಕ್ಕಳು 64.07 ಲಕ್ಷ, 6 -18 ವರ್ಷದೊಳಗಿನ ಮಕ್ಕಳು 1 ಕೋಟಿ 10 ಲಕ್ಷ , 18 ವರ್ಷ ಒಳಗಿನವರು 1 ಕೋಟಿ 75 ಲಕ್ಷ. ತಜ್ಞರ ಪ್ರಕಾರ 1 ಕೋಟಿ 75 ಲಕ್ಷ ಮಕ್ಕಳಲ್ಲಿ ಶೇ.1 ರಷ್ಟು ಮಂದಿಗೆ ಸೋಂಕು ತಗುಲಿದರೆ ಸೋಂಕಿತರಲ್ಲಿ ಶೇ.10 ರಷ್ಟು ಮಕ್ಕಳಿಗೆ ಆಸ್ಪತ್ರೆ ದಾಖಲಾತಿ ಬೇಕು. ಹೀಗಾದರೆ ಸರಿಸುಮಾರು 17,500 ಬೆಡ್ ಅಗತ್ಯ ಎದುರಾಗಲಿದೆ. ಆದರೆ ಇಷ್ಟು ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.