ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಹಾಗೂ ಹೊಸ ಮಾದರಿಯ ಸೋಂಕು ಪ್ರಕರಣ ಹರಡದಂತೆ ಮುಂಜಾಗ್ರತಾ ಕ್ರಮಕೈಗೊಂಡು, ಪ್ರಮುಖ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ತಂಡಗಳನ್ನು ನಿಯೋಜಿಸಿ ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಕಡ್ಡಾಯ ಪರೀಕ್ಷೆ ಮಾಡಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ವರ್ಚುವಲ್ ಮೂಲಕ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಹೊರ ವಲಯದ ಗಡಿ ಭಾಗದಲ್ಲಿ ಕೋವಿಡ್ ಪರೀಕ್ಷೆ ಮಾಡುವ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ.
ಕೋವಿಡ್ ಹಾಗೂ ಹೊಸ ಮಾದರಿಯ ಸೋಂಕು ಪ್ರಕರಣ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕಳೆದ ವಾರದಿಂದ ಸರಾಸರಿ 160 ಕೋವಿಡ್ ಪ್ರಕರಣ ಕಂಡು ಬರುತ್ತಿವೆ. ನ.26 ರಂದು(ನಿನ್ನೆ) 224 ಕೋವಿಡ್ ಪ್ರಕರಣ ಕಂಡು ವರದಿಯಾಗಿವೆ. ಈ ಪೈಕಿ ಆನೇಕಲ್ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣ ಕಂಡು ಬಂದಿವೆ. ಆ ಭಾಗದಲ್ಲಿ ಕಟ್ಟೆಚ್ಚರವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.