ಬೆಂಗಳೂರು: ಕೊರೊನಾ ವೈರಸ್ ಎಷ್ಟರ ಮಟ್ಟಿಗೆ ಜನಜೀವನ ಅಸ್ತವ್ಯಸ್ತ ಮಾಡಿದೆ ಅಂದ್ರೆ ಮತ್ತೆ ಮೇಲೇಳಲು ಸಾಧ್ಯವಾಗದಷ್ಟು ಪೆಟ್ಟು ಕೊಟ್ಟಿದೆ. ಕೊರೊನಾ ಬಂದು ಬರೋಬ್ಬರಿ 7 ತಿಂಗಳೇ ಕಳೆದಿವೆ. ಆದರೂ ಸೋಂಕಿನ ಅಟ್ಟಹಾಸ ನಿಯಂತ್ರಣಕ್ಕೇ ಬಂದಿಲ್ಲ. ಮತ್ತೊಂದೆಡೆ ಅದರ ಹೊಡೆತಕ್ಕೆ ಒಳಗಾಗದವರು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲ ಕ್ಷೇತ್ರದ ಬುಡವನ್ನು ಮುಟ್ಟಿ ಕೆದಕಿ ಬಂದಿರುವ ವೈರಸ್, ಸ್ವ-ಸಹಾಯ ಗುಂಪುಗಳಿಗೂ ದೊಡ್ಡ ಮಟ್ಟದ ಸಂಕಷ್ಟವನ್ನೇ ತಂದೊಡ್ಡಿದೆ.
ಕೋವಿಡ್ ಪರಿಣಾಮ ಸಾವಿರಾರು ಸ್ವ-ಸಹಾಯ ಗುಂಪುಗಳ ಸಾವಿರಾರು ಮಹಿಳೆಯರ ಬದುಕು ಅತಂತ್ರದಲ್ಲಿದೆ. ಸಾಲ ಪಡೆದು ಸಣ್ಣಪುಟ್ಟ ಉದ್ಯಮ ಶುರು ಮಾಡಿದವರಿಗೆ ಸಾಲ ಮರುಪಾವತಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸ್ವಸಹಾಯ ಗುಂಪುಗಳ ಮೂಲಕ ಉದ್ಯಮಗಳನ್ನು ಆರಂಭಿಸಿ ಬದುಕು ಕಟ್ಟಿಕೊಂಡವರೆಷ್ಟೋ ಮಂದಿ ನಡು ಬೀದಿಗೆ ಬಂದು ನೆರವಿಗಾಗಿ ಕೈಚಾಚಿದ್ದಾರೆ.
ಆದರೆ, ಈ ಸಂಕಷ್ಟದ ಸಮಯದಲ್ಲೂ ಕೊಂಚ ನಿರಾಳರಾಗಿದ್ದು ಹೊಲಿಗೆ ಯಂತ್ರ ಹೊಂದಿದ್ದ ಮಹಿಳೆಯರು ಮಾತ್ರ. ಕೊರೊನಾಗೂ ಮುನ್ನ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಿದ್ದವರಿಗೆ ಕೈಕಾಲು ಕಟ್ಟಿ ಹಾಕಿದಂತಾಗಿತ್ತು. ಮಾಸ್ಕ್ ಹಾಗೂ ಗೌನ್ಗೆ ಹೆಚ್ಚು ಬೇಡಿಕೆ ಬಂದ ಪರಿಣಾಮ ಇದರ ತಯಾರಿಗೆ ಹೊಸ ದಾರಿ ತೋರಿಸಿತು.