ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಜನರ ಸಹಕಾರದೊಂದಿಗೆ ಇನ್ನಷ್ಟು ಸೋಂಕಿನ ಪ್ರಮಾಣ ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಹತ್ತು ದಿನದಿಂದ 300ಕ್ಕೂ ಕಡಿಮೆ ಪ್ರಕರಣ ಕಂಡು ಬರುತ್ತಿವೆ. ಜನರ ಸಹಕಾರದೊಂದಿಗೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲಿಸಿದ್ರೆ ಪ್ರಕರಣಗಳ ಸಂಖ್ಯೆಯನ್ನು ಮತ್ತಷ್ಟು ಇಳಿಕೆ ಮಾಡಲು ಸಾಧ್ಯ ಎಂದರು.
ನಗರದಲ್ಲಿ ಶ್ರಾವಣ ಮಾಸ, ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಜಂಗುಳಿ ಉಂಟಾಗಿತ್ತು. ಇದರಿಂದ ಕೋವಿಡ್ ಏರಿಕೆಯಾಗುವ ಆತಂಕ ಉಂಟಾಗಿತ್ತು. ಸದ್ಯಕ್ಕೆ ಕೋವಿಡ್ ಪ್ರಕರಣ ನಿಯಂತ್ರಣದಲ್ಲಿರುವುದರಿಂದ ಬಿಬಿಎಂಪಿ ನಿಟ್ಟುಸಿರು ಬಿಟ್ಟಿದೆ ಎಂದರು.