ಬೆಂಗಳೂರು: ಆಗಸ್ಟ್ ತಿಂಗಳಿನಲ್ಲಿ ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಇದ್ದು, ಈ ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಮೂರನೇ ಅಲೆ ನಿಯಂತ್ರಿಸಿದ ಅನುಭವ ನಮಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ, ಆದರೆ ಕೋವಿಡ್ ನಿಯಮಗಳನ್ನು ಪಾಲನೆಯನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಶಶಿಲ್ ನಮೋಶಿ, ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಅನೇಕ ದೇಶಗಳಲ್ಲಿ ಲಾಕ್ ಡೌನ್ ನಂತಹ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಹಾಗಾಗಿ ರಾಜ್ಯದಲ್ಲಿ 4 ನೇ ಅಲೆ ತಡೆಗೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕಾನ್ಪುರ ಐಐಟಿಯು ದೇಶದಲ್ಲಿ 4 ನೇ ಅಲೆ ಆಗಸ್ಟ್ ನಲ್ಲಿ ಬರುತ್ತದೆ ಎಂದು ವರದಿ ನೀಡಿದೆ. ಇದರ ಆಧಾರದಲ್ಲಿ ಭಾರತದಲ್ಲಿ ಕೊರೊನಾ 4ನೇ ಅಲೆ ಆಗಸ್ಟ್ ನಲ್ಲಿ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ಲಸಿಕಾ ಅಭಿಯಾನ ಮಾಡಲಾಗಿರುವುದರಿಂದಾಗಿ ಹೆಚ್ಚು ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 4.74 ಕೋಟಿ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಶೇ. 96 ರಷ್ಟು ಜನ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಜೊತೆಗೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಈಗಾಗಲೇ 1.25 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ಅಭಿಯಾನ ಕೈಗೊಂಡಿರುವುದರಿಂದ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ವಿದೇಶದಲ್ಲಿ ಬಿಎ2 ಎಂಬ ಹೊಸ ಕೊರೊನಾ ಪ್ರಭೇದ ವರದಿಯಾಗಿದ್ದು, ಇದು ಫಿಲಿಪೈನ್ಸ್ ನಲ್ಲಿ ಮೊದಲು ಕಂಡು ಬಂದಿದೆ. ಈಗ 40 ದೇಶಗಳಲ್ಲಿ ಕಾಣಿಸಿಕೊಂಡಿದ್ದು, ನಾವು ಎಷ್ಟೇ ಸುರಕ್ಷಿತವಾಗಿದ್ದೇವೆ ಎಂದರೂ ಕೋವಿಡ್ ನಿಯಮಗಳನ್ನ ಮರೆಯುವಂತಿಲ್ಲ, ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಮುಂದುವರೆಯಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗಾಗಿ ಮಾಸ್ಕ್ ಕಡ್ಡಾಯ ಮುಂದುವರೆಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಇದೇ ವೇಳೆ ಸಚಿವರು ಹೇಳಿದ್ದಾರೆ.
ನಾಲ್ಕನೇ ಅಲೆ ಎದುರಿಸಲು ಸನ್ನದ್ಧ..ಕೋವಿಡ್ ನಾಲ್ಕನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಅಗತ್ಯ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮವಾಗಿ 55 ಸಾವಿರ ಬೆಡ್ ಗಳನ್ನು, 1170 ಮೆಟ್ರಿಕ್ ಟನ್ ಆಕ್ಸಿಜನ್ ಸಂಗ್ರಹಿಸಲಾಗಿದೆ. ಪ್ರತಿನಿತ್ಯ 2.5 ಲಕ್ಷ ಕೋವಿಡ್ ಟೆಸ್ಟ್ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ. ರಾಜ್ಯದಲ್ಲಿ ಒಟ್ಟು 265 ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ. 3ನೇ ಅಲೆ ಎದುರಿಸಿರೋ ಅನುಭವ ನಮಗೆ ಇದ್ದು, 4 ನೇ ಅಲೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾಗಿ ಜನರು ಯಾವುದೇ ರೀತಿಯ ಆತಂಕ ಪಡುವ ಅಗತ್ಯ ಇಲ್ಲ. ಧೈರ್ಯವಾಗಿರಿ, ಕೋವಿಡ್ ನಿಯಮಗಳನ್ನು ಪಾಲಿಸಿ ಎಂದು ಸಲಹೆ ನೀಡಿದ್ದಾರೆ.
ಓದಿ :ಹಿಜಾಬ್ ತೀರ್ಪು ಸಂಬಂಧ ಬಂದ್ಗೆ ಕರೆ ನೀಡಿದ್ದು ನ್ಯಾಯಾಂಗ ನಿಂದನೆ: ರಿಟ್ ಸಲ್ಲಿಕೆ