ಕರ್ನಾಟಕ

karnataka

ETV Bharat / city

ಕೋವಿಡ್ ಉಪಕರಣ ಖರೀದಿ: ಐವರು ಸಚಿವರು ಕಾಂಗ್ರೆಸ್ ಆರೋಪಕ್ಕೆ ಕೊಟ್ಟ ಲೆಕ್ಕ ಹೀಗಿದೆ..

ಕಾಂಗ್ರೆಸ್​​ ವಿಪಕ್ಷ ನಾಯಕ ಸಿದ್ದರಾಮಯ್ಯ ಹಚ್ಚಿದ ಭ್ರಷ್ಟಾಚಾರದ ಕಿಡಿಗೆ ಬಿಜೆಪಿ ಸರ್ಕಾರ ತಣ್ಣಗಾಗಿತ್ತು. ಸದ್ಯ ಲೆಕ್ಕಸಮೇತ ಸವಿವರಾಗಿ ಸರ್ಕಾರದ ಐವರು ಸಚಿವರು ಕೈನಾಯಕರ ಲೆಕ್ಕಕ್ಕೆ ಉತ್ತರ ನೀಡಿದ್ದಾರೆ. ಅಲ್ಲದೆ ಮೈತ್ರಿ ಸರ್ಕಾರ ಹೆಚ್ಚಿನ ದರಕ್ಕೆ ವೆಂಟಿಲೇಟರ್ ಖರೀದಿ ಮಾಡಿರುವುದಾಗಿ ದಾಖಲೆ ಸಮೇತ ಆರೋಪಿಸಿದ್ದಾರೆ.

covid-19-equipment-purchase-report
ಸಚಿವರ ಸಭೆ

By

Published : Jul 23, 2020, 9:38 PM IST

ಬೆಂಗಳೂರು: ಕಾಂಗ್ರೆಸ್ ಆರೋಪಕ್ಕೆ ಸಚಿವರುಗಳು ಇಂದು ದಾಖಲೆ ಸಮೇತ ಸ್ಪಷ್ಟನೆ ‌ನೀಡಿದ್ದು, ಕೋವಿಡ್ ಪರಿಕರ ಖರೀದಿ ಹಗರಣ ಆರೋಪಕ್ಕೆ ವಿವರವಾದ ಲೆಕ್ಕ ಕೊಟ್ಟಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇಂದು ಮಾಡಿದ ಹಗರಣ ಆರೋಪ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ಕಾಂಗ್ರೆಸ್ ಆರೋಪಕ್ಕೆ ಬಲವಾದ ತಿರುಗೇಟು ನೀಡಲು ಸಿಎಂ ಯಡಿಯೂರಪ್ಪ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್.ಅಶೋಕ್, ಡಿಸಿಎಂ ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕಣಕ್ಕಿಳಿಸಿದ್ದರು.

ವೆಂಟಿಲೇಟರ್‌ ಖರೀದಿ ಲೆಕ್ಕ:

ಸರ್ಕಾರ ಕೋವಿಡ್ ಪ್ರಾರಂಭವಾದಾಗಿನಿಂದ ಅಂದರೆ ಮಾರ್ಚ್ 22 ರಿಂದ ವಿವಿಧ ಮಾದರಿಯ 747 ವೆಂಟಿಲೇಟರ್​ಗಳನ್ನು ವಿವಿಧ ಕಂಪನಿಗಳಿಂದ ಖರೀದಿಸಿದೆ. 1,541 ವೆಂಟಿಲೇಟರ್‌ಗಳನ್ನು ಖರೀದಿಸಲು ಬೇಡಿಕೆ ಇಡಲಾಗಿತ್ತು. ಅದರಲ್ಲಿ 747 ವೆಂಟಿಲೇಟರ್ ಪೂರೈಕೆಯಾಗಿದೆ. ಇವುಗಳಿಗೆ ಒಟ್ಟು ವೆಚ್ಚವಾಗಿರುವುದು 10.61 ಕೋಟಿ ರೂ. ಎಂದು ತಿಳಿಸಿದ್ದಾರೆ. ಮತ್ತು 200 ವೆಂಟಿಲೇಟರ್ ಅನ್ನು 18.20 ಕೋಟಿ ರೂ.ನಲ್ಲಿ ಖರೀದಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು ಎಂದು ವಿವರಿಸಿದ್ದಾರೆ.

ಪಿಪಿಇ ಕಿಟ್ ಖರೀದಿ ಎಷ್ಟು?

ಮಾರ್ಚ್ 9 ರಿಂದ ಏಪ್ರಿಲ್ 29ರವರೆಗೆ 12.12 ಪಿಪಿಇ ಕಿಟ್‌ಗೆ ಆರ್ಡರ್ ಮಾಡಲಾಗಿತ್ತು. ಈ ಪೈಕಿ 9,65,910 ಪಿಪಿಇ ಕಿಟ್ ಪೂರೈಕೆಯಾಗಿದೆ ಎಂದು ಸ್ಪಷ್ಟಪಡಿಸಿದರು. ಇದಕ್ಕಾಗಿ 100.77 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಆಮದು‌‌ ಮಾಡಲಾದ ಪಿಪಿಇ ಕಿಟ್​ಗೆ ಚಾರ್ಟರ್ ಫ್ಲೈಟ್ ಚಾರ್ಜ್, ಏರ್ ಇಂಡಿಯಾ ಚಾರ್ಜ್, ಜಿಎಸ್‌ಟಿ ಸೇರಿ ಒಟ್ಟು 21.42 ಕೋಟಿ ರೂ. ಸೇರಿದೆ ಎಂದು ವಿವರಿಸಿದ್ದಾರೆ.

ಎನ್ 95 ಮಾಸ್ಕ್ ಖರೀದಿ ಎಷ್ಟು?

25,57,830 ಎ‌‌ನ್ 95 ಮಾಸ್ಕ್‌ಗೆ ಆದೇಶ ನೀಡಲಾಗಿತ್ತು. ಇದರಲ್ಲಿ ಪೂರೈಕೆಯಾಗಿರುವುದು 11,60,671 ಮಾಸ್ಕ್. ಒಟ್ಟು 11.51 ಕೋಟಿ ರೂ. ವೆಚ್ಚದಲ್ಲಿ ಮಾಸ್ಕ್ ಖರೀದಿ ಮಾಡಲಾಗಿದೆ ಎಂದು ವಿವರಿಸಿದರು. ಈ‌ ಮಾಸ್ಕ್‌ಗಳನ್ನು ಪ್ರತಿ ಯೂನಿಟ್‌ಗೆ 156.8 ರೂ., 147 ರೂ., 126 ರೂ., 97.89 ರೂ. ದರಗಳಲ್ಲಿ ಖರೀದಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಸರ್ಜಿಕಲ್ ಗ್ಲೋವ್ಸ್ ಲೆಕ್ಕ:

ಕೋವಿಡ್ ಅವಧಿಯಲ್ಲಿ ಕೇವಲ 30,000 ಸರ್ಜಿಕಲ್ ಗ್ಲೋವ್ಸ್ ಮಾತ್ರ ಖರೀದಿ‌ ಮಾಡಲಾಗಿದೆ. ಇದಕ್ಕಾಗಿ 28.50 ಲಕ್ಷ ರೂ. ಮಾತ್ರ ಖರ್ಚಾಗಿದೆ. ಕೇವಲ 6 ಲಕ್ಷ ಗ್ಲೋವ್ಸ್ ಇನ್ನೂ ಪೂರೈಕೆಯಾಗಿಲ್ಲ. ಕರ್ನಾಟಕ ಡ್ರಗ್ ಲಾಜಿಸ್ಟಿಕ್ ವೇರ್ ಹೌಸ್ ಸೊಸೈಟಿಯಿಂದ ಈವರೆಗೆ ಯಾವುದೇ ಟೆಸ್ಟಿಂಗ್ ಗ್ಲೋವ್ಸ್ ಖರೀದಿ ಮಾಡಲಾಗಿಲ್ಲ‌ ಎಂದು ದಾಖಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಆಕ್ಸಿಜನ್ ಸಿಲಿಂಡರ್ ಲೆಕ್ಕ:

ಭಾರತ ಸರ್ಕಾರ 2,585 ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದೆ. ಕರ್ನಾಟಕ ಡ್ರಗ್ ಲಾಜಿಸ್ಟಿಕ್ ವೇರ್ ಹೌಸ್ ಸೊಸೈಟಿ ಯಾವುದೇ ಖರೀದಿ‌ ಮಾಡಿಲ್ಲ. ಇನ್ನು 34,000 ದರದಲ್ಲಿ 250 ಕಿಯೋಸ್ಕ್ ಖರೀದಿ ಮಾಡಲಾಗಿದ್ದು, 85 ಲಕ್ಷ ರೂ. ಖರ್ಚಾಗಿದೆ ಎಂದು ವಿವರಿಸಿದ್ದಾರೆ.

ಹ್ಯಾಂಡ್ ಸ್ಯಾನಿಟೈಸರ್ ಖರೀದಿ:

ಒಟ್ಟು 1,08,230 ಯುನಿಟ್ 500 ml ಸ್ಯಾನಿಟೈಸರ್ ಪೂರೈಕೆಯಾಗಿದ್ದು, ಅದಕ್ಕೆ 2.65 ಕೋಟಿ ರೂ. ವೆಚ್ಚವಾಗಿದೆ ಎಂದು ವಿವರಿಸಿದ್ದಾರೆ. ಇನ್ನು 75,000 ಯುನಿಟ್ 5000ml ಸ್ಯಾನಿಟೈಸರ್ ಪೂರೈಕೆಯಾಗಿದ್ದು, ಅದಕ್ಕೆ 18.75 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಟ್ಟು 20.78 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಕಾರ್ಮಿಕ ಇಲಾಖೆಯ ಖರ್ಚು:

ಕಾರ್ಮಿಕ ಇಲಾಖೆಯಲ್ಲಿ ಕೋವಿಡ್ ಸಂಬಂಧ 1,000 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಆರೋಪಿಸಲಾಗಿದೆ. ಆದರೆ ಕಾರ್ಮಿಕ ಇಲಾಖೆಯಲ್ಲಿ ಒಟ್ಟು ಖರ್ಚಾಗಿದ್ದೇ 892 ಕೋಟಿ ರೂ. ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು. 16,32,328 ಕಾರ್ಮಿಕರಿಗೆ 5 ಸಾವಿರ ರೂ.ರಂತೆ 816 ಕೋಟಿ ಖರ್ಚು ಮಾಡಿದ್ದೇವೆ. 76 ಕೋಟಿ ರೂ. ಇತರೆ ಕಾರ್ಮಿಕರ ವಸತಿ, ಊಟ, ಬಟ್ಟೆ ವ್ಯವಸ್ಥೆ ಉದ್ದೇಶಕ್ಕೆ ಖರ್ಚು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಹಿಂದಿನ‌ ಸರ್ಕಾರ ಹೆಚ್ಚಿನ ದರಕ್ಕೆ ವೆಂಟಿಲೇಟರ್ ಖರೀದಿ:

ಹಿಂದಿನ ಮೈತ್ರಿ ಸರ್ಕಾರ ಹೆಚ್ಚಿನ ದರಕ್ಕೆ ವೆಂಟಿಲೇಟರುಗಳನ್ನು ಖರೀದಿಸಿದೆ ಎಂದು ಸಚಿವರು ಆರೋಪಿಸಿದ್ದಾರೆ. ಈ ಸಂಬಂಧ ದಾಖಲೆ ಬಿಡುಗಡೆ ಮಾಡಿರುವ ಅವರು, ಜನವರಿ 2019ರಲ್ಲಿ ಚೆನ್ನೈ ಕಂಪನಿಯಿಂದ 9 ಯುನಿಟ್ ಐಸಿಯು ವೆಂಟಿಲೇಟರ್‌ ಅನ್ನು 14.51 ಲಕ್ಷಕ್ಕೆ ಖರೀದಿ‌ ಮಾಡಲಾಗಿದೆ ಎಂದು ದೂರಿದರು.

ಜುಲೈ 2019ರಲ್ಲಿ 28 ಯುನಿಟ್ ಐಸಿಯು ವೆಂಟಿಲೇಟರ್​ನ್ನು ಗುರುಗ್ರಾಂ ಕಂಪನಿಯೊಂದರಿಂದ 15.12 ಲಕ್ಷ ರೂ.ಗೆ ಖರೀದಿ‌ ಮಾಡಲಾಗಿದೆ. ಅದೇ ರೀತಿ ಜನವರಿ 2019ರಲ್ಲಿ ಬೆಂಗಳೂರಿನ ಕಂಪನಿಯೊಂದರಿಂದ 9 ಯುನಿಟ್ ವೆಂಟಿಲೇಟರ್ ಅನ್ನು 21.73 ಲಕ್ಷ ರೂ. ನಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details