ಬೆಂಗಳೂರು: ಅಳೆದು ತೂಗಿ ಕಡೆಗೂ ರಾಜ್ಯದಲ್ಲಿ ಟಫ್ ರೂಲ್ಸ್ ಅನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ವೀಕೆಂಡ್ ಲಾಕ್ ಡೌನ್ ಜೊತೆಗೆ ಶಾಪಿಂಗ್, ಜಿಮ್, ಸಿನಿಮಾ ಮಂದಿರ ಸೇರಿ ಹಲವು ವಲಯಗಳಿಗೆ ನಿರ್ಬಂಧ ವಿಧಿಸಿದೆ. ಯಾವುದಕ್ಕೆ ಅವಕಾಶ, ಯಾವುದಕ್ಕೆಲ್ಲಾ ನಿರ್ಬಂಧ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ನೈಟ್ ಕರ್ಫ್ಯೂ: ಇಂದಿನಿಂದ ಮೇ 4 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ ಮಾಡಲಾಗಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ಬದಲು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ.
ವೀಕೆಂಡ್ ಕರ್ಫ್ಯೂ: ಇಂದಿನಿಂದ ಮೇ 4 ರವರೆಗೆ ಪ್ರತಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ.
ನಿರ್ಬಂಧಿತ ಚಟುವಟಿಕೆ: ಶಾಲಾ-ಕಾಲೇಜುಗಳು, ಶಿಕ್ಷಣ ತರಬೇತಿ ಕೇಂದ್ರಗಳು, ಎಲ್ಲಾ ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್‌ಗಳು, ಜಿಮ್‌ಗಳು, ಯೋಗ ಕೇಂದ್ರಗಳು, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ತಾಣಗಳು, ಸಭಾಂಗಣಗಳು, ರಂಗಮಂದಿರಗಳಿಗೆ ನಿರ್ಬಂಧ, ಕ್ರೀಡಾಪಟುಗಳ ತರಬೇತಿಗಾಗಿ ಮಾತ್ರ ಅನುಮತಿ ಪಡೆದ ಈಜುಕೊಳಕ್ಕೆ ಅನುಮತಿ ಇದೆ.
ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರೆ ಜನ ಸೇರುವ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಎಲ್ಲಾ ದೇವಾಲಯ, ಪ್ರಾರ್ಥನಾ ಮಂದಿರಗಳು ಭಕ್ತರಿಗೆ ಮುಚ್ಚಲ್ಪಟ್ಟಿದ್ದು, ಕೇವಲ ಪೂಜಾ ಕೈಂಕರ್ಯಗಳು ಮಾತ್ರ ಅರ್ಚಕರಿಂದ, ಸಂಬಂಧಪಟ್ಟ ವ್ಯಕ್ತಿಗಳಿಂದ ಅವುಗಳ ಸಂಪ್ರದಾಯದಂತೆ ನೆರವೇರಲು ಅನುಮತಿ ನೀಡಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ದರ್ಶನಿಗಳಲ್ಲಿ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.
ನಿರ್ಮಾಣ ಚಟುವಟಿಕೆ: ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳು ಹಾಗೂ ಸಿವಿಲ್ ಕೆಲಸಗಳ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಳೆಗಾಲ ಪೂರ್ವದ ಕಾಮಗಾರಿಗಳ ಆರಂಭಕ್ಕೆ ಅನುಮತಿ ಕೊಡಲಾಗಿದೆ. ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ನಿರ್ಮಾಣ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಕೈಗಾರಿಕಾ ವಲಯ: ಎಲ್ಲಾ ರೀತಿಯ ಕೈಗಾರಿಕೆಗಳಿಗೆ, ಉತ್ಪಾದಕ ಘಟಕಗಳಿಗೆ ಅವಕಾಶ ಕಲ್ಪಿಸಲಿದೆ. ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿ ಕೈಗಾರಿಕೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಿದೆ. ಕೈಗಾರಿಕೆಗಳ ಐಡಿ ಕಾರ್ಡ್ ತೋರಿಸಿ ಸಿಬ್ಬಂದಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ವಾಣಿಜ್ಯ ಚಟುವಟಿಕೆಗಳು:ದಿನಸಿ ಅಂಗಡಿಗಳು, ಹಣ್ಣು, ಹಾಲು, ತರಕಾರಿ ಅಂಗಡಿಗಳು, ಮೀನು ಮತ್ತು ಮಾಂಸದ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 23ರ ಒಳಗೆ ಮಾರುಕಟ್ಟೆಗಳನ್ನು ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಬೇಕು. ವಸತಿ ಹೋಟೆಲ್‌ಗಳಲ್ಲಿ ಅತಿಥಿಗಳಿಗೆ ಮಾತ್ರ ಸೇವೆ ನೀಡಬಹುದಾಗಿದೆ.