ಬೆಂಗಳೂರು:ವಕೀಲರನ್ನು ಪ್ಯಾನಲ್ಗೆ ಸೇರಿಸಿಕೊಳ್ಳುವುದು ಬ್ಯಾಂಕ್ನ ವಿವೇಚನೆಗೆ ಬಿಟ್ಟ ವಿಚಾರ. ಇಂತಹ ವಿಷಯಗಳಲ್ಲಿ ರಿಟ್ ಕೋರ್ಟ್ ಸಾಮಾನ್ಯವಾಗಿ ಮಧ್ಯಪ್ರವೇಶಿಸಲು ಮತ್ತು ಆಳವಾಗಿ ಪರೀಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮನ್ನು ಬ್ಯಾಂಕ್ ಪ್ಯಾನಲ್ನಿಂದ ಕೈಬಿಟ್ಟ ಕ್ರಮ ಪ್ರಶ್ನಿಸಿ ವಕೀಲ ತಿಮ್ಮಣ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ವಕೀಲರನ್ನು ಪ್ಯಾನಲ್ಗೆ ಸೇರಿಸಿಕೊಳ್ಳುವುದು ಬ್ಯಾಂಕ್ ವಿವೇಚನೆಗೆ ಬಿಟ್ಟಿರುವ ವಿಚಾರ. ಹಾಗೆಯೇ ಇದೊಂದು ಕಕ್ಷಿದಾರ ಮತ್ತು ವಕೀಲರ ನಡುವಿನ ಸಂಬಂಧದಂತೆಯೇ ಇರುತ್ತದೆ. ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.