ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾದ ಕಣ್ಣೀರ ಕಥೆಗಳು ಮುಗಿಯುವ ಹಾಗೆ ಕಾಣುತ್ತಿಲ್ಲ. ಸೋಂಕಿತರು ಸರಿಯಾದ ಸಮಯಕ್ಕೆ ಬೆಡ್ ಸಿಗದೇ ಮನೆಯಲ್ಲೇ ಕೊನೆಯುಸಿರೆಳೆಯುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಬೆಂಗಳೂರಿನ ಬಿಟಿಎಂ ಲೇಔಟ್‌ನ ಮೊದಲ ಹಂತದಲ್ಲಿ ನಡೆದ ಘಟನೆ ಎಂಥವರಿಗೂ ಅಯ್ಯೋ ಅನ್ನಿಸದೇ ಇರಲಾರದು. ಇಲ್ಲಿ 65 ವರ್ಷದ ಪತ್ನಿ ಹಾಗು 75 ವರ್ಷದ ಪತಿ ಇಬ್ಬರೂ ಕೊರೊನಾಗೆ ಬಲಿಯಾಗಿದ್ದಾರೆ.
ಘಟನೆಯ ವಿವರ
ಕೊರೊನಾ ಸೋಂಕು ದೃಢಪಟ್ಟ ಬಳಿಕ ಬೆಡ್‌ಗಾಗಿ ಎರಡು ದಿನಗಳ ಕಾಲ ಈ ದಂಪತಿ ಹುಡುಕಾಡಿದ್ದಾರೆ. ಆದರೆ ಬೆಡ್ ಸಿಗದ ಕಾರಣಕ್ಕೆ ಅಸಹಾಯಕರಾಗಿ ಮನೆಯಲ್ಲೇ ಉಳಿದುಕೊಂಡರು. ದುರಾದೃಷ್ಟವಶಾತ್ ಎಂಬಂತೆ ಪತ್ನಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಪಕ್ಕದಲ್ಲೇ ಪತ್ನಿಯ ಶವದ ಜೊತೆಯಲ್ಲೇ ಆಕ್ಸಿಜನ್ ನೆರವಿನಲ್ಲಿ ಪತಿ ಏದುಸಿರುಬಿಡುತ್ತಿದ್ದರು. ಈ ದೃಶ್ಯ ಮನಕಲುಕುವಂತಿತ್ತು.