ಕರ್ನಾಟಕ

karnataka

ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಹಿರಿಯ ಸಚಿವರೊಂದಿಗೆ ಸಿಎಂ ಸಭೆ: ಆಕಾಂಕ್ಷಿಗಳಿಂದ ಅಂತಿಮ ಕಸರತ್ತು!

By

Published : Jan 12, 2021, 9:20 PM IST

ಹೈಕಮಾಂಡ್​ನಿಂದ ಸಚಿವರ ಪಟ್ಟಿ ಯಡಿಯೂರಪ್ಪ ಕೈಸೇರಿದ ಹಿನ್ನೆಲೆ ಅಧಿಕೃತ ನಿವಾಸ ಕಾವೇರಿಗೆ ಹಿರಿಯ ಸಚಿವರನ್ನು ಸಿಎಂ ಕರೆಸಿಕೊಂಡರು. ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಿಲುವು, ಪಟ್ಟಿಯಲ್ಲಿರುವ ಹೆಸರುಗಳು, ಯಾರಿಗೆ ಅವಕಾಶ ನೀಡಿದರೆ ಏನೆಲ್ಲಾ ವಿದ್ಯಮಾನಗಳು ನಡೆಯಲಿವೆ, ಕೆಲವರಿಗೆ ಮನವೊಲಿಸಬೇಕಿದ್ದು, ಅದನ್ನು ಯಾರು ನಿರ್ವಹಿಸಬೇಕು ಎಂದೆಲ್ಲಾ ಆಪ್ತರೊಂದಿಗೆ ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ.

ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಸಿಎಂ ನಿವಾಸ ಕಾವೇರಿಯಲ್ಲಿ ಸಂಪುಟದ ಹಿರಿಯ ಸಹೋದ್ಯೋಗಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸುತ್ತಿದ್ದಾರೆ.

ಹೈಕಮಾಂಡ್​ನಿಂದ ಸಚಿವರ ಪಟ್ಟಿ ಯಡಿಯೂರಪ್ಪ ಕೈಸೇರಿದ ಹಿನ್ನೆಲೆ ಅಧಿಕೃತ ನಿವಾಸ ಕಾವೇರಿಗೆ ಹಿರಿಯ ಸಚಿವರನ್ನು ಸಿಎಂ ಕರೆಸಿಕೊಂಡರು. ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಿಲುವು, ಪಟ್ಟಿಯಲ್ಲಿರುವ ಹೆಸರುಗಳು, ಯಾರಿಗೆ ಅವಕಾಶ ನೀಡಿದರೆ ಏನೆಲ್ಲಾ ವಿದ್ಯಮಾನಗಳು ನಡೆಯಲಿವೆ, ಕೆಲವರಿಗೆ ಮನವೊಲಿಸಬೇಕಿದ್ದು, ಅದನ್ನು ಯಾರು ನಿರ್ವಹಿಸಬೇಕು ಎಂದೆಲ್ಲಾ ಆಪ್ತರೊಂದಿಗೆ ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾವೇರಿ ನಿವಾಸಕ್ಕೆ ಸಚಿವರು ಹಾಗೂ ಆಕಾಂಕ್ಷಿಗಳ ಭೇಟಿ

ಒಂದು ವೇಳೆ ಯಾರನ್ನಾದರೂ ಸಂಪುಟದಿಂದ ಕೈಬಿಡಬೇಕಾದಲ್ಲಿ ಅವರಿಗೆ ನಾಳಿನ ಸಂಪುಟ ಸಭೆ ಕಡೆಯ ಸಭೆಯಾಗಲಿದ್ದು, ಅವರಿಗೆ ಮಾಹಿತಿ ನೀಡುವ, ಸಮಾಧಾನಪಡಿಸುವ ಕುರಿತು ಸಮಾಲೋಚನೆ ನಡೆಸಲಾಯಿತು ಎನ್ನಲಾಗುತ್ತಿದೆ.

ಇನ್ನೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ಸಿಎಂ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಸಂಪುಟ ಸೇರಲು ಕೊನೆಯ ಸುತ್ತಿನ ಕಸರತ್ತು ನಡೆಸುತ್ತಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದ ಸಿ.ಪಿ.ಯೋಗೇಶ್ವರ್ ಸಿಎಂ ನಿವಾಸಕ್ಕೆ ಆಗಮಿಸಿ ಕೆಲಕಾಲ ಮಾತುಕತೆ ನಡೆಸಿದರು. ಆದರೆ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿ ನಿರ್ಗಮಿಸಿದರು.

ನಂತರ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಆಗಮಿಸಿದ್ದು, ಸಿಎಂ ಭೇಟಿ ಮಾಡಿ ತಮ್ಮ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನದಿಂದಲೇ ಬಿಡಾರ ಹಾಕಿದ ಮುನಿರತ್ನ:
ಇನ್ನು ವಲಸಿಗರ ಕೋಟಾದಲ್ಲಿ ಸಚಿವ ಸ್ಥಾನ ಪಕ್ಕಾ ಎನ್ನುತ್ತಿರುವ ಮುನಿರತ್ನಗೆ ಕೊನೆ ಕ್ಷಣದ ಆತಂಕ ಶುರುವಾಗಿದೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನಗೆ ಸಚಿವ ಸ್ಥಾನ ಅಂತಿಮವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಎಂಟಿಬಿ ಮತ್ತು ಶಂಕರ್ ಫುಲ್ ಖುಷಿಯಲ್ಲಿದ್ದಾರೆ. ಆದರೆ ಮುನಿರತ್ನ ಮಾತ್ರ ಆತಂಕಕ್ಕೆ ಸಿಲುಕಿದ್ದಾರೆ ಎನ್ನಲಾಗ್ತಿದೆ.

ಸಚಿವರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಬನ್ನಿ ಎಂದು ಸಿಎಂ ಕಡೆಯಿಂದ ದೂರವಾಣಿ ಕರೆ ಬಂದಿಲ್ಲ ಎಂದು ಖುದ್ದಾಗಿ ಮಧ್ಯಾಹ್ನದಿಂದಲೇ ಸಿಎಂ ನಿವಾಸ ಕಾವೇರಿಗೆ ಆಗಮಿಸಿ ಸ್ಪಷ್ಟತೆಗಾಗಿ ಕಾದು ಕುಳಿತಿದ್ದಾರೆ. ಕೆಲವರಿಗೆ ದೂರವಾಣಿ ಕರೆ ಬಂದಿದೆ ಎನ್ನುವ ಮಾಹಿತಿಯಿಂದ ಆತಂಕಕ್ಕೆ ಸಿಲುಕಿ ಸಿಎಂ ನಿವಾಸದಲ್ಲೇ ಮುನಿರತ್ನ ಬಿಡಾರ ಹಾಕಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details