ಬೆಂಗಳೂರು:ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಭಾಪತಿ ಪೀಠದಲ್ಲಿ ಸುದೀರ್ಘ ವಿದಾಯ ಭಾಷಣ ಮಾಡಿದ ನಂತರ ತಮ್ಮ ಕಚೇರಿಗೆ ತೆರಳಿದ ಸಭಾಪತಿಗಳು, ಉಪಸಭಾಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ಉಪಸಭಾಪತಿ ಎಂ.ಕೆ ಪ್ರಾಣೇಶ್ ರಾಜೀನಾಮೆ ಪತ್ರ ಸಲ್ಲಿಸಿದ ಪರಿಷತ್ ಸಭಾಪತಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಬಿಜೆಪಿ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು. ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಸಭಾಪತಿಗಳು ತೆರಳಿದ್ದು, ಉಪಸಭಾಪತಿಗಳು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಾಳೆ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸುವುದಾಗಿ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಸಮರ ಹಾಗೂ ಗೊಂದಲಗಳಿಗೆ ಇಂದು ಸಭಾಪತಿಗಳು ತೆರೆ ಎಳೆದಿದ್ದು, ಮುಂದಿನ ಹೊಸ ಸಭಾಪತಿಗಳ ನೇಮಕಕ್ಕೆ ಅವಕಾಶ ಮುಕ್ತವಾಗಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ರಾಷ್ಟ್ರಪತಿ ಆಗಮನ: ರಾಜ್ಯಪಾಲ, ಸಿಎಂರಿಂದ ಸ್ವಾಗತ
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಸಾಕಷ್ಟು ಹಗ್ಗಜಗ್ಗಾಟದ ನಂತರ ಇದೀಗ ಸಭಾಪತಿಗಳು ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಸಲ್ಲಿಸುವ ವಿಚಾರದಲ್ಲಿ ತಿಂಗಳ ಹಿಂದೆಯೇ ನಿರ್ಧಾರ ಕೈಗೊಂಡಿದ್ದರು ಎಂಬ ಮಾಹಿತಿ ಇದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜೀನಾಮೆ ವಿಚಾರವಾಗಿ ಅಂತಿಮ ತೀರ್ಮಾನ ಕೈಗೊಂಡು ಪಕ್ಷದ ರಾಜ್ಯ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ಸಭಾಪತಿಗಳಿಗೆ ಬಿಟ್ಟುಕೊಟ್ಟಿದ್ದರು.
ಈ ಹಿನ್ನೆಲೆ ಇಂದು ತಮ್ಮ ನಿರ್ಧಾರ ಕೈಗೊಂಡಿರುವ ಸಭಾಪತಿಗಳು, ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ವಿಧಾನ ಪರಿಷತ್ ನೂತನ ಸಭಾಪತಿಗಳ ನೇಮಕ ಪ್ರಕ್ರಿಯೆ ನಡೆಯುವ ಸಲುವಾಗಿ ಪರಿಷತ್ ಕಲಾಪವನ್ನು ಎರಡು ದಿನ ಮುಂದುವರೆಸುವ ಮನವಿಯನ್ನು ಬಿಜೆಪಿ ಸಲ್ಲಿಕೆ ಮಾಡಿದ್ದು, ಇದೀಗ ಸಭಾಪತಿ ಸ್ಥಾನದಲ್ಲಿ ಕೂರಲಿರುವ ಉಪಸಭಾಪತಿಗಳು ಪರಿಷತ್ ಅಧಿವೇಶನ ವಿಸ್ತರಿಸುವ ಇಲ್ಲವೇ ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರ ಕೈಗೊಳ್ಳಲಿದ್ದಾರೆ.