ಬೆಂಗಳೂರು: ಭಾರತೀಯ ವಕೀಲರ ಪರಿಷತ್(ಬಿಸಿಐ)ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ನಡೆಸಬೇಕಿದ್ದ ಚುನಾವಣೆಯನ್ನು ಮುಂದೂಡಿರುವುದಾಗಿ ಹೈಕೋರ್ಟ್ಗೆ ತಿಳಿಸಿರುವ ಬಿಸಿಐ ಈ ಸಂಬಂಧ ಕೈಗೊಂಡಿರುವ ನಿರ್ಣಯಗಳನ್ನು ಮರು ಪರಿಶೀಲಿಸುವುದಾಗಿ ತಿಳಿಸಿದೆ.
ಬಿಸಿಐ ಚುನಾವಣೆ ಪ್ರಶ್ನಿಸಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ನ ಬಿಸಿಐ ಸದಸ್ಯರಾದ ವಕೀಲ ವೈ.ಆರ್. ಸದಾಶಿವರೆಡ್ಡಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ನಿನ್ನೆ ವಿಚಾರಣೆ ನಡೆಸಿತು.
ಈ ವೇಳೆ ಬಿಸಿಐ ಪರ ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, ಭಾರತೀಯ ವಕೀಲರ ಪರಿಷತ್ ಚುನಾವಣೆ ನಡೆಸುವ ಸಂಬಂಧ ಕೈಗೊಂಡಿರುವ ಎಲ್ಲ ನಿರ್ಣಯಗಳನ್ನು ಮರು ಪರಿಶೀಲಿಸಲು ಉದ್ದೇಶಿಸಿದೆ. ಹಾಗಾಗಿ, ಚುನಾವಣೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಅಲ್ಲದೇ, ಚುನಾವಣೆ ನಡೆಸುವ ಸಂಬಂಧ ಬಿಸಿಐ 2017ರ ಅಕ್ಟೋಬರ್ 28ರಂದು ಹಾಗೂ 2019ರ ನವೆಂಬರ್ 11 ರಂದು ಕೈಗೊಂಡಿರುವ ನಿರ್ಣಯಗಳನ್ನು ಮರು ಪರಿಶೀಲಿಸಲು ಜನರಲ್ ಕೌನ್ಸಿಲ್ ಮೀಟಿಂಗ್ ನಡೆಸಲು ಉದ್ದೇಶಿಸಿದೆ. ಸಭೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಅಡಿಯಲ್ಲಿ ಚುನಾವಣೆ ನಡೆಸುವ ಅವಧಿ ಹಾಗೂ ಭವಿಷ್ಯದಲ್ಲಿ ಚುನಾವಣೆ ನಡೆಸುವ ನಿಯಮಗಳ ಕುರಿತು ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಜೊತೆಗೆ, ಈ ಸಂಬಂಧ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಲಾಗಿದೆ ಎಂದರು.