ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ, ಸಂಘಟನೆ ಹಿನ್ನೆಲೆಯ ನಾಯಕಿ ಎಸ್ಟಿ ಸಮುದಾಯದ ಹೇಮಲತಾ ನಾಯಕ, ಲಿಂಗಾಯತ ಸಮುದಾಯದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಒಬಿಸಿಗೆ ಸೇರಿದ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್ಗೆ ಬಿಜೆಪಿ ಮಣೆ ಹಾಕಿದೆ.
ಪದೇ ಪದೇ ಬಿಜೆಪಿ ಅನಿರೀಕ್ಷಿತ ಆಯ್ಕೆ ಮಾಡುತ್ತಲೇ ಬಂದಿದೆ. ಇಂದು ಕೂಡ ಹೇಮಲತಾ ನಾಯಕ್, ಸವದಿ ಹೆಸರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ. ಆಕಾಂಕ್ಷಿಯಾಗಿ ಕಚೇರಿಗೆ ಬಂದಿದ್ದ ಮಂಜುಳಾ ನಿರಾಶರಾಗಿ ವಾಪಸ್ಸಾಗುವಂತಾಯಿತು. ಇನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಬಸವರಾಜ ಹೊರಟ್ಟಿ ಅವರ ಹೆಸರನ್ನು ಪ್ರಕಟಿಸಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಹೊರಟ್ಟಿ ಈಗಾಗಲೇ ಪ್ರಚಾರ ಆರಂಭಿಸಿದ್ದು, ಇಂದು ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.
ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು. ಅಂತೆಯೇ ಸಂಭಾವ್ಯ ಅಭ್ಯರ್ಥಿಗಳು ಪಕ್ಷದ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಆದ್ರೆ ಅಚ್ಚರಿಯ ಬೆಳವಣಿಗೆಯಲ್ಲಿ ಲಕ್ಷಣ ಸವದಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಜೂನ್ 3ರಂದು ವಿಧಾನ ಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನಮ್ಮ ತಂಡಕ್ಕೆ ಅವಕಾಶ:ನನ್ನ ತಂಡದ ನಾಲ್ವರು ಸದಸ್ಯರಿಗೆ ಪರಿಷತ್ ಚುನಾವಣೆಗೆ ಟಿಕೆಟ್ ಸಿಕ್ಕಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವ ರೀತಿ ನಮ್ಮ ಹೈಕಮಾಂಡ್, ಅಭ್ಯರ್ಥಿಗಳ ಆಯ್ಕೆ ಮಾಡಿದೆ. ನಾವು ಶಿಫಾರಸು ಮಾಡಿದ್ದ ಹೆಸರುಗಳಲ್ಲಿಯೇ ಈ ಆಯ್ಕೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳ ಹೆಸರು ಪ್ರಕಟಗೊಂಡ ನಂತರ ಮಲ್ಲೇಶ್ವರಂ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳಲ್ಲಿ ನಾಲ್ಕು ಹೆಸರುಗಳನ್ನು ನಮ್ಮ ಹೈಕಮಾಂಡ್ ಘೋಷಣೆ ಮಾಡಿದೆ. ಇವರೆಲ್ಲಾ ನನ್ನ ತಂಡದ ಸಹ ಸದಸ್ಯರಾಗಿದ್ದಾರೆ. ಲಕ್ಷ್ಮಣ ಸವದಿ ರಾಜ್ಯದ ಉಪಾಧ್ಯಕ್ಷರಾಗಿದ್ದಾರೆ, ಹೇಮಲತಾ ನಾಯಕ್ ಕಾರ್ಯದರ್ಶಿಯಾಗಿದ್ದಾರೆ, ಚಲವಾದಿ ನಾರಾಯಣಸ್ವಾಮಿ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ, ಕೇಶವಪ್ರಸಾದ್ ಕಾರ್ಯದರ್ಶಿ ಮತ್ತು ಪ್ರಭಾರಿಯಾಗಿದ್ದಾರೆ. ನಮ್ಮ ತಂಡದ ನಾಲ್ಕು ಜನ ಇವತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗುತ್ತಿರುವುದರಿಂದ ಇದು ಬಹಳ ಸಂತೋಷದ ದಿನವಾಗಿದೆ ಎಂದರು.