ಬೆಂಗಳೂರು: ಬಿಜೆಪಿ ಸರ್ಕಾರವನ್ನು ಸಮರ್ಥಿಸಿಕೊಂಡು ಪ್ರತಿಪಕ್ಷಗಳ ಆರೋಪಕ್ಕೆ ತೀಕ್ಷ್ಣ ತಿರುಗೇಟು ನೀಡುವ ಭರದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸದಸ್ಯ ನವೀನ್ ಸಭಾಪತಿಗಳನ್ನೇ ಪ್ರಶ್ನೆ ಮಾಡುವ ಧಾಟಿಯಲ್ಲಿ ಮಾತನಾಡಿ ಸಭಾಪತಿಗಳಿಂದ ಎಚ್ಚರಿಕೆ ಪಡೆದು ಕ್ಷಮೆ ಕೋರಿದ ಪ್ರಸಂಗ ನಡೆಯಿತು.
ವಿಧಾನ ಪರಿಷತ್ನ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ನವೀನ್, ಬೊಮ್ಮಾಯಿ ಬಜೆಟ್ ಸಮರ್ಥಿಸಿಕೊಂಡು ಸುದೀರ್ಘ ಭಾಷಣ ಮಾಡಿದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ನಿಗದಿಪಡಿಸಿದ್ದ 22 ನಿಮಿಷ ಸಮಯ ಆಗುತ್ತಿದೆ ಎಂದಿದ್ದಕ್ಕೆ ನವೀನ್ ಅಸಮಾಧಾನ ವ್ಯಕ್ತಪಡಿಸಿದರು. ನಾವು ಮೂರು ದಿನ ತಯಾರಿ ಮಾಡಿಕೊಂಡು ಬಂದಿದ್ದೇವೆ. ಕಾಲೆಳೆಯುವವರಿಗೆ ಗಂಟೆಗಟ್ಟಲೆ ಕೊಟ್ಟು ಈಗ ಬಜೆಟ್ ಪಾಯಿಂಟ್ ಮೇಲೆ ಮಾತನಾಡುತ್ತಿದ್ದರೆ ಅವಕಾಶ ಕೊಡಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಇದಕ್ಕೆ ಅಸಮಾಧಾನಗೊಂಡ ಸಭಾಪತಿ, ಒಂದು ವ್ಯವಸ್ಥೆಗೆ ಒಪ್ಪಿಕೊಳ್ಳಲ್ಲ ಎಂದರೆ ಹೇಗೆ?. ಎಷ್ಟು ಸಮಯವಾದರೂ ಮಾತನಾಡಿಕೊಳ್ಳಿ ಎನ್ನುತ್ತಾ ಆಡಳಿತ ಪಕ್ಷದ ವಿಪ್ ಕಡೆ ತಿರುಗಿ ನೀವು ನಿಮ್ಮ ಸದಸ್ಯರಿಗೆ ಹೇಳಬೇಕಲ್ಲವಾ? ಹೇಗೆ ಬೇಕೋ ಹಾಗೆ ಮಾತನಾಡುತ್ತಾರಲ್ಲಾ? ಎಂದರು.
ಇದನ್ನೂ ಓದಿ:ವಿಧಾನಸಭೆ: ಹೈಕೋರ್ಟ್ ಆದೇಶ ಧಿಕ್ಕರಿಸಿ ಪ್ರತಿಭಟಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ನಂತರ ಮಾತು ಮುಂದುವರೆಸಿದ ಸದಸ್ಯ ನವೀನ್, ಪ್ರತಿಪಕ್ಷಗಳ ವಿರುದ್ಧ ಮುಗಿಬಿದ್ದರು. ಪ್ರತಿಪಕ್ಷ ನಾಯಕರು ಮೋದಿ ಸರ್ಕಾರದವರು 11 ಲಕ್ಷ ಕೋಟಿ ರೂ ಕಾರ್ಪೊರೇಟ್ ಸಾಲ ಮನ್ನಾ ಮಾಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಆದರೆ ಸಾಲಮನ್ನಾ ಮಾಡಿರುವ ದಾಖಲೆ ಕೊಟ್ಟು ಮಾತನಾಡಬೇಕು. ಅವರಿಗೆಲ್ಲಾ ಸಾಲ ಕೊಟ್ಟಿದ್ದು ಮನಮೋಹನ್ ಸಿಂಗ್ ಸರ್ಕಾರ, ಮೋದಿ ಸರ್ಕಾರ ಸಾಲ ವಾಪಸ್ ಪಡೆಯಲು ಕ್ರಮ ಕೈಗೊಂಡಿದೆ. ಆಸ್ತಿ ಜಪ್ತಿ ಮಾಡಿಕೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡರು.