ಬೆಂಗಳೂರು:ಪ್ರತಿಯೊಬ್ಬರ ಮನೆಯಲ್ಲಿ ಯಾವುದಾದರೂ ಒಂದು ವಾಹನ ಇದ್ದೇ ಇರುತ್ತದೆ. ಅದರ ಜೊತೆಗೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುವುದು ಅನಿವಾರ್ಯವಾಗಿರುತ್ತದೆ. ಅವುಗಳಲ್ಲಿ ಡ್ರೈವಿಂಗ್ ಲೈಸನ್ಸ್ ಅತಿ ಮುಖ್ಯವಾಗಿರುತ್ತದೆ. ಇವುಗಳನ್ನು ಆರ್‌ಟಿಒ ಕಚೇರಿಯಲ್ಲಿ ಪಡೆಯಬೇಕು.
ರಾಜ್ಯದಲ್ಲಿ 67 ಆರ್‌ಟಿಒ ಕಚೇರಿಗಳಿದ್ದು, ಡಿ ಎಲ್ ಅಥವಾ ಎಲ್ ಎಲ್ ಪಡೆಯೋದಕ್ಕೆ ಕೆಲವರು ಮಧ್ಯವರ್ತಿಗಳ ಮೊರೆ ಹೋಗುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲವರಿಗಂತೂ ಸದ್ಯ ಜಾರಿಯಲ್ಲಿರುವ ಆನ್ಲೈನ್ ಅರ್ಜಿಯ ಬಗ್ಗೆ ಮಾಹಿತಿ ಇಲ್ಲ. ಮಧ್ಯವರ್ತಿಗಳು ಅತಿ ಹೆಚ್ಚು ಹಣ ಪಡೆದುಕೊಂಡು ಡಿ ಎಲ್ ಹಾಗೂ ಎಲ್ಎಲ್ ಮಾಡಿಸಿಕೊಡುತ್ತಾರೆ ಎಂಬ ಆರೋಪಗಳು ದಟ್ಟವಾಗಿವೆ.
ಸದ್ಯ ದ್ವಿಚಕ್ರ ವಾಹನ ಕಲಿಯಲು ನೀಡುವ ಎಲ್ಎಲ್ ಪತ್ರಕ್ಕೆ 150 ರೂಪಾಯಿ, ಹಾಗೆ ಚಾಲನಾ ಪರವಾನಿಗೆಯ ಪರೀಕ್ಷಾ ಶುಲ್ಕಕ್ಕೆ 50 ರೂಪಾಯಿ, ಚಾಲನಾ ಪತ್ರಕ್ಕೆ 300 ರೂಪಾಯಿ ಶುಲ್ಕವನ್ನು ಸರ್ಕಾರ ವಿಧಿಸಿದೆ.
ಆದರೆ 2,500 ಅಥವಾ 3000 ರೂಪಾಯಿ ನೀಡಿದರೆ ಅತಿ ಬೇಗನೆ ಲೈಸೆನ್ಸ್ ಮಾಡಿ ಕೊಡುವುದಾಗಿ ಬ್ರೋಕರ್ಗಳು ನಂಬಿಸಿ ಲೂಟಿ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದ್ದಾರೆ. ಹಾಗೆಯೇ ಕಾರಿನ ಪರವಾನಿಗೆ ಸರ್ಕಾರಿ ಶುಲ್ಕ 1000 ರೂಪಾಯಿ ಇದ್ದರೆ, ಬ್ರೋಕರ್ಗಳು ಆರೇಳು ಸಾವಿರ ರೂಪಾಯಿಯಲ್ಲಿ ಬೇಗನೇ ಪರವಾನಿಗೆ ಸಿಗುವಂತೆ ಮಾಡುತ್ತೇವೆ ಎಂದು ನಂಬಿಸುತ್ತಾರೆ.
ಆನ್ಲೈನ್ನಲ್ಲಿ ಸುಲಭವಾಗಿ ಪಡೆಯಬಹುದು ಲೈಸೆನ್ಸ್..!
ಮಧ್ಯವರ್ತಿಗಳ ಬಳಿಹೋಗದೆ ನಾವು ಆನ್ಲೈನ್ ಮುಖಾಂತರ ಎಲ್ ಎಲ್, ಡಿಎಲ್ ಅಥವಾ ಇತರೆ ಸೇವೆಗಳನ್ನ ಪಡೆಯಬಹುದು. ಸದ್ಯ ಸಾರಥಿ ವೆಬ್ ಹಾಗೂ ಮೊಬೈಲ್ ಆಧಾರಿತ ಅಪ್ಲಿಕೇಷನ್ ಇದ್ದು, ಇದರಲ್ಲಿ ಎಲ್ಎಲ್ ಅರ್ಜಿ ಸಲ್ಲಿಕೆ ಮಾಡಬಹುದು. ತದನಂತರ ಸ್ಲಾಟ್ ಆಧಾರದ ಮೇರೆಗೆ ಆರ್‌ಟಿಓ ಕಚೇರಿಗೆ ತೆರಳಿ ಪರೀಕ್ಷೆಯನ್ನು ಬರೆದು, ಸ್ಮಾರ್ಟ್ ಕಾರ್ಡ್ ಪಡೆದು ಮೂವತ್ತು ದಿನದ ಬಳಿಕ ಡಿಎಲ್ ಟೆಸ್ಟ್ಗೆ ತೆರಳಬಹುದು.
ಆನ್ಲೈನ್ನಲ್ಲೇ ಎಲ್ಲಾ ತಾಳ್ಮೆಯಿಂದ ಕೆಲಸ ಮುಗಿಸಿದರೆ ಮಧ್ಯವರ್ತಿಗಳ ಕಾಟ ಇರಲ್ಲ. ಹಾಗೆಯೇ ಪ್ರತಿನಿತ್ಯ ಆರ್‌ಟಿಒ ಕಚೇರಿಗೆ ಅಲೆದಾಡುವುದನ್ನ ತಪ್ಪಿಸಬಹುದು. ಸದ್ಯ ಆರ್ಟಿಒಗೆ ಸಂಬಂಧಿಸಿದ ಎಲ್ಲಾ ವಹಿವಾಟು ಆನ್ಲೈನ್ನಲ್ಲಿ ನಡೆಯುತ್ತದೆ. ಉದಾಹರಣಗೆ ಮಾಲೀಕತ್ವ ವರ್ಗಾವಣೆ, ವಾಹನದ ಫಿಟ್ನೆಸ್ ಪ್ರಮಾಣಪತ್ರ, ವಾಹನಗಳ ನೋಂದಣಿ ನವೀಕರಣ, ವಾಹನಗಳ ಮಾರ್ಪಾಡು ಹೀಗೆ ಪ್ರತಿಯೊಂದು ಕೂಡ ಆನ್ಲೈನ್ ನಲ್ಲಿಯೇ ನಡೆಯುತ್ತದೆ.