ಬೆಂಗಳೂರು : 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ಭಾಗಿಯಾಗಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಮತ್ತು 9 ಮಂದಿ ಮಾಜಿ ಸದಸ್ಯರನ್ನು ಅಭಿಯೋಜನೆಗೊಳಪಡಿಸುವ ಕುರಿತು ಕೆಲ ಕಾನೂನು ತೊಡಕು ಇರುವುದರಿಂದ ಸಂಪುಟ ಉಪ ಸಮಿತಿ ರಚನೆ ಮಾಡಲು ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು, ತಮ್ಮ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗುವುದು. ಇದರಲ್ಲಿ ಸಚಿವರಾದ ಬಸವರಾಜ್ ಬೊಮ್ಮಾಯಿ ಹಾಗೂ ಡಾ. ಕೆ ಸುಧಾಕರ್ ಸದಸ್ಯರಾಗಿರುತ್ತಾರೆ.
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಮತ್ತು 9 ಮಾಜಿ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ವಿಚಾರದ ಬಗ್ಗೆ ಸಂಪುಟ ಉಪ ಸಮಿತಿಯಿಂದ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಹಿಂದಿನ ಸರ್ಕಾರ ರಾಜ್ಯಪಾಲರನ್ನು ಪ್ರಾಸಿಕ್ಯೂಷನ್‌ಗೆ ಕೇಳಿದ್ದರು. ಇದರಲ್ಲಿ ಸಾಕಷ್ಟು ಗೊಂದಲ ಇರುವುದರಿಂದ ಸಂಪುಟ ಉಪ ಸಮಿತಿ ನೇಮಕ ಮಾಡಲಾಗಿದೆ ಎಂದರು.
ಹಣದ ಕೊರತೆ ಇಲ್ಲ :ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ. ಆದರೆ, ಮಾಮೂಲಿ ಆದಾಯದಲ್ಲಿ ಸ್ವಲ್ಪ ಕೊರತೆ ಆಗಿದೆ. ಅದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಪ್ರಪಂಚದಾದ್ಯಂತ ಕೋವಿಡ್‌ನಿಂದ ಸಮಸ್ಯೆ ಆಗಿದೆ. ಅದೇ ರೀತಿ ರೆವಿನ್ಯೂ ಸೇರಿ ಸ್ವಲ್ಪ ಕಡಿಮೆ ಆಗಿರೋದು ನಿಜ ಎಂದು ಹೇಳಿದರು.
ಬೆಂಗಳೂರು ವಿಭಜನೆ ಇಲ್ಲ :ನಾವು ಬೆಂಗಳೂರು ವಿಭಜನೆ ಮಾಡಲ್ಲ. ವಲಯಗಳನ್ನು ಹೆಚ್ಚಳ ಮಾಡಲು ನಿರ್ಧಾರ ಮಾಡಿದ್ದೇವೆ. ಎಲ್ಲವನ್ನೂ ಚರ್ಚಿಸಿ ಈ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣ :ದೆಹಲಿಯಲ್ಲಿ ಹೊಸ ಕರ್ನಾಟಕ ಭವನ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹಿಂದೆ ₹89 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಈಗ ₹120 ಕೋಟಿಗೆ ಹೆಚ್ಚಿಸಲಾಗಿದೆ. ಒಟ್ಟು 7635 ಸ್ಕ್ವಯರ್ ಮೀಟರ್‌ನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಸೆ. 18ರಂದು ಸಿಎಂ ಯಡಿಯೂರಪ್ಪ ಕಟ್ಟಡ ನಿರ್ಮಾಣ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಬಾಲಾಜಿ ಗ್ರೂಪ್ ಆಫ್ ಪ್ರೈ.ಲಿಗೆ ನೀಡಲಾಗಿದೆ ಎಂದು ವಿವರಿಸಿದರು.
ಗಣಿಗಾರಿಕೆಗೆ ತೀರ್ಮಾನ :ಸಂಡೂರು ತಾಲೂಕು ದೋಣಿ ಮಲೈ ಪ್ರದೇಶದಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಸಂಪುಟ ತೀರ್ಮಾನಿಸಿದೆ. ಸಿಎಂ ಹಾಗೂ ಕೇಂದ್ರ ಗಣಿ ಸಚಿವರಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ. ಗಣಿ ಕೆಲಸ ಆರಂಭಿಸಲು ತೀರ್ಮಾನಿಸಲಾಗಿದೆ. ವಾರ್ಷಿಕ 600 ಕೋಟಿ ರೂ. ಆದಾಯ ನಿರೀಕ್ಷೆ ನಿರೀಕ್ಷೆ ಇದೆ ಎಂದು ಹೇಳಿದರು.
ತುಮಕೂರು ಕ್ಯಾತಸಂದ್ರ ಬಳಿ ರೈಲ್ವೆ ಪಾಸಿಂಗ್ ಫ್ಲೈ ಓವರ್ ಮಾಡಲು ತೀರ್ಮಾನ. ರಾಜ್ಯದ ಪಾಲು 14 ಕೋಟಿ ರೂ. ಒಟ್ಟು ವೆಚ್ಚ 35.43 ಕೋಟಿ ರೂ. ಆಗಿದೆ. ಭೂ ಕಾಯ್ದೆ 64/2ರಲ್ಲಿ ತಿದ್ದುಪಡಿ ಮಾಡಲು ತೀರ್ಮಾನ. ನಗರ ಪ್ರದೇಶದಲ್ಲಿ ಬಿ.ಕರಾಬ್ ಭೂಮಿಯನ್ನು ಮಾರಾಟ ಮಾಡಲು ಗೈಡನ್ಸ್ ವ್ಯಾಲ್ಯೂ ಮೇಲೆ 4 ಪಟ್ಟು ಹೆಚ್ಚಳಕ್ಕೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಮನೆ, ಅಪಾರ್ಟ್‌ಮೆಂಟ್ ಕಟ್ಟಿಕೊಂಡಿದ್ರೆ, ಅವರಿಂದ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿ ಮಾರಾಟ ಮಾಡಲು ಅವಕಾಶ ಇಲ್ಲ ಎಂದರು.