ಬೆಂಗಳೂರು: ಲಾಕ್ಡೌನ್ ಆದ ಕಾರಣ ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಮೆಟ್ರೋ, ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ಪೊಲೀಸರು ಗಸ್ತು ಬಿಟ್ಟರೆ ಯಾರೂ ಸಹ ಅಲ್ಲಿ ಸುಳಿದಿಲ್ಲ.
ಜನರಿಲ್ಲದೇ ಬಿಕೋ ಎನ್ನುತ್ತಿವೆ ಮೆಜೆಸ್ಟಿಕ್, ರೈಲ್ವೆ ಸ್ಟೇಷನ್
ಸಿಲಿಕಾನ್ ಸಿಟಿ ಬಹುತೇಕ ಕಡೆ ಸ್ತಬ್ಧವಾಗಿದೆ. ಒಂದು ವೇಳೆ ಜನರು ಮನೆಯಿಂದ ಹೊರಬಂದರೆ ಪೊಲೀಸರು ಲಾಠಿ ರುಚಿ ತೋರಿಸಲು ಕಾದು ಕುಳಿತಿದ್ದಾರೆ. ಹೀಗಾಗಿ ಜನಸಂದಣಿಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿವೆ.
ಮೆಜೆಸ್ಟಿಕ್ ಖಾಲಿ, ಖಾಲಿ
ಬೆಂಗಳೂರಿನ ಹಾರ್ಟ್ ಆಫ್ ಸಿಟಿ ಎಂದೇ ಕರೆಸಿಕೊಳ್ಳುವ ಮೆಜೆಸ್ಟಿಕ್ ಜನರಿಲ್ಲದೆ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಒಂದು ವೇಳೆ ಯಾರಾದರು ವಾಹನದಲ್ಲಿ ಅಥವಾ ರಸ್ತೆ ಬಳಿ ಸುಳಿದಾಡಿದರೆ ಅವರನ್ನು ಪೊಲೀಸರು ವಾಹನಗಳನ್ನ ನಿಲ್ಲಿಸಿ ವಿಚಾರಣೆ ನಡೆಸಿ ಎಚ್ಚರಿಕೆ ನೀಡುತ್ತಿದ್ದಾರೆ.
ಹಾಗೆಯೇ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಕೂಡ ಜನರಿಲ್ಲದೇ ಟಿಕೆಟ್ ಕೌಂಟರ್ ಸಂಪೂರ್ಣ ಖಾಲಿ ಖಾಲಿಯಾಗಿದೆ. ಹೆಚ್ಚಿನ ಭದ್ರತೆಗಾಗಿ ರೈಲ್ವೆ ನಿಲ್ದಾಣದ ಬಳಿ 20 ಪೊಲೀಸರನ್ನು ನಿಯೋಜಿಸಲಾಗಿದೆ.